ನ್ಯೂಸ್

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನುಡಿನಮನ ರಾಮೋಜಿ ರಾವ್, ಮದನಮೋಹನ ಅವರಿಗೆ KUWJ ಶ್ರದ್ಧಾಂಜಲಿ

Bengaluru - Political - Shivananda Tagadur

ಬೆಂಗಳೂರು:
ಸದಾ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದ ಸಾಹಸಿ ರಾಮೋಜಿ ರಾವ್ ಅವರಿಂದ ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ದೊರೆತಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಮಾಹಿತಿ ಕಣಜವೇ ಆಗಿದ್ದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ಅವರು ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದು ಎಂದು ಕೆಯುಡಬ್ಲೂೃಜೆ ಶ್ಲಾಸಿದೆ.
ಪದ್ಮವಿಭೂಷಣ ಪುರಸ್ಕೃತ ರಾಮೋಜಿ ರಾವ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತಿಹಳ್ಳಿ ಮದನ ಮೋಹನ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ) ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಗಣ್ಯರು ಅವರ ಗುಣಗಾನ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಇಬ್ಬರು ಪತ್ರಕರ್ತರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ, ಒಂದು ನಿಮಿಶ ಮೌನಾಚರಣೆ ಮಾಡಲಾಯಿತು.
ನ್ಯೂಸ್ ಫಸ್ಟ್ ಕನ್ನಡ ಟಿ.ವಿ. ವಾಹಿನಿಯ ಎಂ.ಡಿ. ಹಾಗೂ ಸಿ.ಇ.ಒ. ಎಸ್, ರವಿ ಕುಮಾರ್ ಮಾತನಾಡಿ, ಈಟಿವಿ ವಾಹಿನಿಯ ಮುಖ್ಯಸ್ಥರಾಗಿದ್ದ ರಾಮೋಜಿ ರಾವ್ ಅವರು ಉತ್ಸಾಹಿ ಪತ್ರಕರ್ತರಿಗೆ ಸದಾ ಮಾರ್ಗದರ್ಶರೂ, ಪ್ರೋತ್ಸಾಹಕರಾಗಿದ್ದರು. ಸದಾ ಸಮಯ ಬದ್ಧತೆಯಿಂದ ತಮ್ಮ ಜೀವನ ಸಾಗಿಸಿದವರು. ನಾಡಿನ ಸಾವಿರಾರು ಪತ್ರಕರ್ತರಿಗೆ ಉದ್ಯೋಗ ನೀಡಿದ್ದಲ್ಲದೆ, ಅವರ ಪ್ರೀತಿ ಪಾತ್ರರಾಗಿದ್ದರು ಎಂದರು.
ಸದಾ ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಛಲವನ್ನೂ ಬೆಳೆಸಿದ್ದರು. ಪ್ರತಿಯೊಂದು ವಿಷಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರ ವೃತ್ತಿ ಜೀವನದ ಕಾರ್ಯಗಳೆಲ್ಲವೂ ಶ್ಲಾಘನೀಯ ಎಂದರು.

ಸಂಪಾದಕೀಯ ಸ್ವಾತಂತ್ರ
ಅವಧಿ ಸಂಪಾದಕ ಜಿ.ಎನ್.ಮೋಹನ್, ತಮ್ಮ ಮತ್ತು ರಾಮೋಜಿ ರಾವ್ ಸುದ್ದಿ ಸಂಸ್ಥೆಯಲ್ಲಿ ಅವರು ಪತ್ರಕರ್ತರಿಗೆ ನೀಡುತ್ತಿದ್ದ ಸಂಪಾದಕೀಯ ಸ್ವಾತಂತ್ರ್ಯ ನಿಜಕ್ಕೂ ಪ್ರಶಂಸನೀಯವಾಗಿತ್ತು ಎಂದು ಒಡನಾಟವನ್ನು ಸ್ಮರಿಸಿಕೊಂಡರು.
ಕಷ್ಟದಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಲ್ಲದೆ, ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಸಾಧನೆಯ ಮೆಟ್ಟಿಲಾಗಿಸಿದ ಹೆಗ್ಗಳಿಕೆ ಅವರದು. ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸಿ ಮಾಧ್ಯಮ ಕ್ಷೇತ್ರದಲ್ಲಿಯೇ ದೊಡ್ಡ ಬದಲಾವಣೆಗೆ ಕಾರಣರಾದವರು ರಾಮೋಜಿರಾವ್ ಎಂದರು.
ಪಾರದರ್ಶಕ ವ್ಯಕ್ತಿತ್ವವನ್ನು ಹೊಂದಿದ್ದ ರಾಮೋಜಿ ರಾಯರ ನಿಲುವುಗಳು ಮಾಧ್ಯಮ ರಂಗಕ್ಕೆ ಪೂರಕವಾಗಿದ್ದವು. ಅದೇ ರೀತಿ ಹಿಂದೂ ಪತ್ರಿಕೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮದನಮೋಹನ ಅವರು ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರರಾಗಿದ್ದರು ಎಂದರು.

ನಿಖರ ಮಾಹಿತಿ ಕಣಜ ಮತ್ತಿಹಳ್ಳಿ
ಫೆಡರಲ್’ ಕನ್ನಡ ವೆಬ್ ಸೈಟ್ ಮುಖ್ಯಸ್ಥ ಮುರಳೀಧರ ಖಜಾನೆ ಮಾತನಾಡಿ, ಮತ್ತಿಹಳ್ಳಿ ಮದನ ಮೋಹನ ಅವರು ವೃತ್ತಿಯಲ್ಲಿ ಸದಾ ಬದ್ಧತೆಯನ್ನು ಇಟ್ಟುಕೊಂಡು ಸುದ್ದಿಮನೆಯಲ್ಲಿ ತಮ್ಮದೇ ಆದ ಪ್ರಭುತ್ವ ಸಾಧಿಸಿ, ಒಂದು ತಲೆಮಾರಿಗೆ ಅವರು ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಶ್ಲಾಸಿದರು.
ಸರಳ ಇಂಗ್ಲೀಷ್ ಭಾಷೆಯ ಮೂಲಕ ಹಿಂದೂ ಪತ್ರಿಕೆಯಲ್ಲಿ ವರದಿಗಾರರಾಗಿ ನೈಪುಣ್ಯತೆಯನ್ನು ಸಾಧಿಸಿದವರು, ಪತ್ರಿಕಾ ವೃತ್ತಿಯಲ್ಲಿ ಅವರೆಂದೂ ರಾಜಿಯಾಗದ ವ್ಯಕ್ತಿತ್ವ ಮೈಗೂಡಿಸಿದ್ದರು ಎಂದೂ ಹೇಳಿದರು.

ಇಬ್ಬರದು ಮೇರು ವ್ಯಕ್ತಿತ್ವ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕ ಮಾತನಾಡಿ, ರಾಮೋಜಿ ರಾವ್ ಮತ್ತು ಮತ್ತೀಹಳ್ಳಿ ಮದನಮೋಹನ ಅವರಂತ ಮೇರು ವ್ಯಕ್ತಿತ್ವ ಹೊಂದಿದ್ದವರನ್ನು ಮಾಧ್ಯಮ ಕ್ಷೇತ್ರ ಕಳೆದುಕೊಂಡಿರುವುದು ನೋವಿನ ಸಂಗತಿ ಎಂದರು. ಇಬ್ಬರು ಗಣ್ಯರು ತಮ್ಮದೇ ಆದ ಬಗೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ಶೇಷ ಚಂದ್ರಿಕಾ, ಬಿ.ಎನ್. ಸುಬ್ರಹ್ಮಣ್ಯ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ಎನ್. ಮಲ್ಲಿಕಾರ್ಜುನಯ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಗಣಪತಿ ಗಂಗೊಳ್ಳಿ ಮುಂತಾದವರು ಅಗಲಿದ ಗಣ್ಯರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್, ಕೆ.ಆರ್ . ದೇವರಾಜ್ ಕೋಲಾರದ ವಿ.ಮುನಿರಾಜು, ಧಾರವಾಡ ಮತ್ತು ದಾವಣಗೆರೆ, ಜಿಲ್ಲಾ ಘಟಕಗಳ ಪದಾಧಿಕಾರಿಗಳೂ ಭಾಗವಹಿಸಿದ್ದರು.
ಬೆಂಗಳೂರು ನಗರ ಘಕಟದ ಅಧ್ಯಕ್ಷ ಕೆ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಸಮಿತಿ ಸದಸ್ಯರಾದ ಕೆ.ಎಚ್. ಬಸವರಾಜು, ಎಸ್.ಡಿ. ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತ ಕೋರಿದರು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಧನ್ಯವಾದ ಅರ್ಪಿಸಿದರು.