ನ್ಯೂಸ್

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ; ಥಾಯ್ಲೆಂಡ್​ ಆಗಸದಲ್ಲಿ ಹಾರಾಡಿತ್ತು ರಾಮನ ಧ್ವಜ

ನವದೆಹಲಿ: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. ದೇಶ-ವಿದೇಶಗಳಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಭಕ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ರಾಮನನ್ನು ಬರಮಾಡಿಕೊಂಡಿದ್ದಾರೆ.

ರಾಮನ ಆಗಮನಕ್ಕಾಗಿ ಕಾಯುತ್ತಿದ್ದ ಭಕ್ತರು ತಮ್ಮ ಭಕ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ತೋರ್ಪಡಿಸುತ್ತಿದ್ದರು. ಕೆಲವರು ತಮ್ಮ ಮೈಮೇಲೆ ರಾಮನ ಟ್ಯಾಟೂ ಹಾಕಿಸಿಕೊಂಡರೆ ಇನ್ನು ಕೆಲವರು ತಮ್ಮ ಮನೆ ಹಾಗೂ ಗಾಡಿಗಳ ಮೇಲೆ ಕೇಸರಿ ಧ್ವಜಗಳನ್ನು ಕಟ್ಟಿ ರಾಮನ ಮೇಲೆ ತಮ್ಮಗಿರುವ ಭಕ್ತಿಯನ್ನು ತೋರ್ಪಡಿಸಿದ್ದಾರೆ.

ಇದೀಗ ತಮಿಳುನಾಡಿನ ಥೇಣಿ ಮೂಲದ ಮಾಜಿ ನೌಕಾಪಡೆಯ ಅಧಿಕಾರಿ, ಸ್ಕೈ ಡೈವಿಂಗ್​ನಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿರುವ ಡಾ. ರಾಜ್​ಕುಮಾರ್​ ಎಂಬುವವರು ಇಂದು (ಜನವರಿ 22) ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ಥಾಯ್ಲೆಂಡ್‌ನಲ್ಲಿ 15 ಅಡಿ ಅಗಲ 9 ಅಡಿ ಉದ್ದದ ರಾಮನ ಧ್ವಜವನ್ನು ಹಿಡಿದು ಸ್ಕೈ ಡೈವಿಂಗ್​ ಮಾಡಿದ್ದಾರೆ. ಈ ಮೂಲಕ ರಾಮನ ಮೇಲೆ ತಮ್ಮಗಿರುವ ಭಕ್ತಿಯನ್ನು ತೋರ್ಪಡಿಸಿದ್ದಾರೆ.

ಸ್ಕೈಡೈವಿಂಗ್​ ತರಬೇತುದಾರರಾಗಿರುವ ಇವರು ಇಲ್ಲಿಯವರೆಗೂ ಸುಮಾರು 15,000ಕ್ಕೂ ಅಧಿಕ ಬಾರಿ ಸ್ಕೈಡೈವಿಂಗ್​ ಮಾಡಿದ್ದಾರೆ. ಭಾರತದಲ್ಲಿ ಈವರೆಗೆ ಅತಿ ಹೆಚ್ಚು ಎಂದು ಹೇಳಲಾಗಿದೆ. ಸ್ಕೈಡೈವಿಂಗ್​ನಲ್ಲಿ ಇವರ ಸಾಧನೆಯನ್ನು ಮೆಚ್ಚಿ ಭಾರತ ಸರ್ಕಾರ 2016ರಲ್ಲಿ ರಾಷ್ಟ್ರಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಇವರು ಆಗಸದಲ್ಲಿ ರಾಮನ ಬಾವುಟ ಹಿಡಿದು ಸ್ಕೈಡೈವಿಂಗ್​ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. 500 ವರ್ಷಗಳ ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿ ದೇವಾಲಯ ಇಂದು ಉದ್ಘಾಟನೆಯಾಗಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದ್ದು, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಲಾಗಿದೆ.

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗಾಗಿ ಅಯೋಧ್ಯೆ ನಗರವವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಇಡೀ ನಗರವು ಆಧ್ಯಾತ್ಮಿಕ ವೈಭವದಿಂದ ಹೊಳೆಯಿತು. ಎಲ್ಲಿ ನೋಡಿದರೂ ರಾಮನ ನಾಮ ಸ್ಮರಣೆಯೇ ತುಂಬಿ ತುಳುಕುತ್ತಿತ್ತು. ನಗರದೆಲ್ಲೆಡೆ ರಾಮಲೀಲಾ, ಭಗವದ್ಗೀತಾ ಕಡಲ್, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಕಲಾವಿದರ ಕಲಾ ಪ್ರದರ್ಶನ ಆಕರ್ಷಕವಾಗಿತ್ತು.