ನ್ಯೂಸ್

ರಾಮೇಶ್ವರಂ ಕೆಫೆ ಸ್ಫೋಟ ಮರುಸೃಷ್ಟಿ!

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಸೋಮವಾರ ಶಂಕಿತನನ್ನು ಕರೆತಂದು ಕೃತ್ಯ ಮರುಸೃಷ್ಟಿಸಿ ಮಜಹರ್ ನಡೆಸಿದರು.

ಕಳೆದ ಮಾ. 3ರಂದು ಬ್ರೂಕ್‌ಫೀಲ್ಡ್ ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಸ್ಫೋಟಿಸಲಾಗಿತ್ತು. ಹೋಟೆಲ್ ಸಿಬ್ಬಂದಿ, ಗ್ರಾಹಕರು ಸೇರಿ ಹಲವರಿಗೆ ಗಾಯವಾಗಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ತನಿಖೆ ಕೈಗೊಂಡ ಎನ್‌ಐಎ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು ಮುಸ್ಸಾವಿರ್ ಹುಸೇನ್ ಶಝೀಬ್ (30) ಎಂಬುವರನ್ನು ಕೋಲ್ಕತ್ತದಲ್ಲಿ ಬಂಧಿಸಿದ್ದರು. ಶಂಕಿತರ ವಿಚಾರಣೆ ಕೈಗೊಂಡಿರುವ ಅಧಿಕಾರಿಗಳು, ಕೆಫೆಗೆ ಐಇಡಿ ಇಟ್ಟ ಮುಸ್ಸಾವಿರ್‌ನನ್ನು ಬೆಳಗಿನ ಜಾವ 5 ಗಂಟೆಗೆ ಕೆಫೆ ಬಳಿಗೆ ಕರೆತಂದಿದ್ದರು.

ಶಂಕಿತ ಉಗ್ರ ಓಡಾಡಿದ್ದ ದೃಶ್ಯಾವಳಿಗಳು ಕೆಫೆ ಮತ್ತು ಅಕ್ಕಪಕ್ಕದ ಮಳಿಗೆಗಳ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ವಶಕ್ಕೆ ಪಡೆದಿದ್ದ ಎನ್‌ಐಎ ಅಧಿಕಾರಿಗಳು, ಅದರಲ್ಲಿನ ವಿಡಿಯೋ ತುಣುಕು ಇಟ್ಟುಕೊಂಡು ಕೆಫೆ ಮತ್ತು ರಸ್ತೆ ಮೇಲೆ ಗೆರೆಗಳನ್ನು ಎಳೆದು ಆತ ಎಲ್ಲಿ, ಎಲ್ಲಿ ಹೇಗೆ ನಡೆದುಹೋಗಿದ್ದ ಎಂಬುದನ್ನು ಸೂಕ್ಷ್ಮವಾಗಿ ರಸ್ತೆ ಮೇಲೆ ಮಾರ್ಕ್ ಮಾಡಿದ್ದರು.

ಅದರಂತೆ ಕೃತ್ಯದ ದಿನ ಮುಸ್ಸಾವಿರ್ ಖರೀದಿಸಿದ್ದ ಕ್ಯಾಪ್, ಬಟ್ಟೆ ಮತ್ತು ಬ್ಯಾಗ್ ಅನ್ನೇ ಕೊಟ್ಟು ಕೆಫೆಗೆ ಹೇಗೆ ಬಂದ, ಕೌಂಟರ್‌ನಲ್ಲಿ ಏನು ಖರೀದಿಸಿದ, ಅಲ್ಲಿಂದ ಯಾವ ಟೇಬಲ್‌ಗೆ ಹೋದ, ಎಷ್ಟು ನಿಮಿಷಗಳ ಕಾಲ ಕೆಫೆಯಲ್ಲಿ ಕುಳಿತಿದ್ದ, ಐಇಡಿ ಸ್ಫೋಟಕ ಇದ್ದ ಬ್ಯಾಗ್ ಅನ್ನು ಎಲ್ಲಿ ಇರಿಸಿ ವಾಪಸ್ ತೆರಳಿದ್ದ- ಹೀಗೆ ಪ್ರತಿಯೊಂದು ಘಟನಾವಳಿಯನ್ನು ಮುಸ್ಸಾವಿರ್ ಕಡೆಯಿಂದಲೇ ಮರುಸೃಷ್ಟಿಸಿ ವಿಡಿಯೋ ಮಾಡಿಕೊಂಡು ಮಹಜರ್ ನಡೆಸಿದರು.

ಕೆಫೆಯಿಂದ ಹೊರಟು ಅಲ್ಲಿಂದ ಸಮೀಪದ ಮಸೀದಿಗೆ ಹೋಗಿ ಬಟ್ಟೆ ಬದಲಾಯಿಸಿದ್ದ. ಅಲ್ಲಿಯೂ ಕರೆದೊಯ್ದು ದೃಶ್ಯಾವಳಿಯನ್ನು ಮರುಸೃಷ್ಟಿಸಿ ಎನ್‌ಐಎ ಅಧಿಕಾರಿಗಳು ಒಂದಲ್ಲ ಎರಡು ಎರಡು ಬಾರಿ ಮರುಸೃಷ್ಟಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲರ ಗಮನಸೆಳೆಯಿತು.