ನ್ಯೂಸ್

ಯಾವುದೇ ಕ್ಷೇತ್ರದಲ್ಲಾದರೂ ಆತ್ಮ ಗೌರವಕ್ಕೆ ಧಕ್ಕೆ ಬರಬಾರದು: ಲೈಂಗಿಕ ಕಿರುಕುಳದ ಕುರಿತು ನಟ ರಮೇಶ್​ ಅರವಿಂದ್

ಬೆಂಗಳೂರು: ಭಾರತ ಚಿತ್ರರಂಗದಲ್ಲೇ ಹೊಸ ಅಲೆಯನ್ನೇ ಸೃಷ್ಟಿಸಿರುವ ಜಸ್ಟಿಸ್​ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ನಟಿಯರು ಲೈಂಗಿಕ ಕಿರುಕುಳದಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ದೇಶಾದ್ಯಂತ ಸಖತ್​ ಸದ್ದು ಮಾಡುತ್ತಿದ್ದು, ಬೇರೆ ಚಿತ್ರರಂಗಗಳ ನಟ-ನಟಿಯರು ತಮ್ಮ ಇಂಡಸ್ಟ್ರಿಯಲ್ಲಿನ ಪರಿಸ್ಥಿತಿಗಳ ಬಗ್ಗೆಯೂ ಸಮಿತಿ ರಚಿಸುವಂತೆ ಆಗ್ರಹಿಸುತ್ತಿದ್ದು, #METOO ಅಭಿಯಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಜಸ್ಟಿಸ್​ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲೂ ಕೂಡ ಇದರ ಈ ಬಗ್ಗೆ ಖ್ಯಾತ ನಟ-ನಟಿಯರು ಧ್ವನಿ ಎತ್ತುತ್ತಿದ್ದು, ಈ ಬಗ್ಗೆ ಕಮಿಟಿ ರಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಕುರಿತು ನಟ, ನಿರ್ದೇಶಕ ರಮೇಶ್​ ಅರವಿಂದ್​ ಮಾತನಾಡಿದ್ದು, ಯಾವುದೇ ಕ್ಷೇತ್ರವಾಗಲಿ ಆತ್ಮ ಗೌರವಕ್ಕೆ ಧಕ್ಕೆ ಬರಬಾರದು ಎಂದು ಹೇಳಿದ್ದಾರೆ.

ಚಿತ್ರರಂಗ ಮಾತ್ರವಲ್ಲ ಯಾವುದೇ ಕ್ಷೇತ್ರವಾದರೂ ಸರಿ. ಗಂಡುಹೆಣ್ಣು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಕೊಡಬೇಕಾದ ಗೌರವ, ವೇದಿಕೆ, ಸಂಬಳ ಕೊಡಬೇಕು. ಯಾವುದೇ ಕ್ಷೇತ್ರವಾಗಲಿ ಯಾರಿಗೂ ಆತ್ಮ ಗೌರವಕ್ಕೆ ಧಕ್ಕೆ ಬರಬಾರದು. ಈ ರೀತಿಯ ಘಟನೆ ಎಲ್ಲೇ ನಡೆದರೂ ನಾವು ಅವರ ಜೊತೆ ಇರುತ್ತೇವೆ. ಹೆಣ್ಣು ಮಕ್ಕಳಿಗೆ ಎಲ್ಲಾದರೂ ಅನ್ಯಾಯವಾದರೆ ಅವರಿಗೆ ನ್ಯಾಯ ಸಿಗಲೇ ಬೇಕು ಎಂದು ಹೇಳಿದ್ದಾರೆ.

ಒಂದು ಸಿನಿಮಾ ಟ್ರೈಲರ್​​ಗಾಗಿ ನಾವು ಎಷ್ಟು ಶ್ರಮ ಪಡುತ್ತೇವೆ. ಸಿನಿಮಾಗಾಗಿ ನಾವೆಲ್ಲ ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತೇವೆ. ಸಿನಿಮಾ ಇಮೇಜ್ ಗೆ ಎಲ್ಲೂ ಡ್ಯಾಮೇಜ್ ಆಗಬಾರದು. ಚಿತ್ರರಂಗ ಅನ್ನೋದು ಗ್ರೇಟ್‌ ಫೀಲ್ಡ್ ಯಾರು ಅನುಮಾನ ಪಡಬೇಡಿ. ಕೆಲವರಿಂದ ಏನಾದರೂ ತಪ್ಪಾಗಿದ್ರೆ ಅವರಿಗೆ ಏನು ಬೇಕಾದರೂ ಮಾಡಿ. ಅದನ್ನು ಬಿಟ್ಟು ಸಿನಿಮಾ ನಟರು, ನಟಿಯರು ಎಂದು ಜನರಲೈಸ್ ಮಾಡಬೇಡಿ. ಲೈಂಗಿಕ ಕಿರುಕುಳ ಕೊಡುವವರು ಎಲ್ಲಾ ಕಡೆ ಇರುತ್ತಾರೆ. ಸಿನಿಮಾ ಮಾತ್ರವಲ್ಲ ನಮ್ಮ ಅಕ್ಕ ಪಕ್ಕದ‌ಮನೆಯಲ್ಲೂ ಇರುತ್ತಾರೆ. ಲೈಂಗಿಕ ಕಿರುಕುಳ ಅನ್ನೋದನ್ನು ಸಿನಿಮಾ ಮೇಲೆ ಹಾಕಬೇಡಿ.

ಲೈಂಗಿಕ ಕಿರುಕುಳ ಎಲ್ಲಿ ನಡೆದರೂ ತಪ್ಪು. ಸಿನಿಮಾದಲ್ಲಿ ನಡೆದರೂ ತಪ್ಪು. ಸಿನಿಮಾ ಅನ್ನೋದು ದೊಡ್ಡ ಸಾಗರ ನಮ್ಮ ಅಟೆನ್ಷನ್ ಇರೋದು ಕ್ರಿಯೇಟಿವಿಟಿ ಕಡೆಗೆ. ಯಾರಿಗಾದರೂ ಅನ್ಯಾಯ ಆಗಿದ್ದರೆ ಖಂಡಿತಾ ನಾವು ಜೊತೆಗೆ ಇರುತ್ತೇವೆ. ಅದರೆ ಫೈರ್ ಸಂಸ್ಥೆಯ ಪಾರ್ಟ್ ಆಗಲಾರೆ ಯಾಕಂದ್ರೆ ನಾನು ಆಕ್ಟಿವಿಸ್ಟ್ ಅಲ್ಲ ಎಂದು ನಟ, ನಿರ್ದೇಶಕ ರಮೇಶ್​ ಅರವಿಂದ್​ ಅಭಿಪ್ರಾಯಪಟ್ಟಿದ್ದಾರೆ.