ನಿರ್ದೇಶನ: ಬುಚ್ಚಿ ಬಾಬು ಸನಾ
ತಾರಾಗಣ: ರಾಮಚರಣ್ ತೇಜ, ಶಿವರಾಜಕುಮಾರ್, ಜಾಹ್ನವಿ ಕಪೂರ್, ಜಗಪತಿ ಬಾಬು, ರವಿಕಿಶನ್, ದಿವ್ಯೇಂದು ಶರ್ಮಾ ಮತ್ತಿತರರು
ಭಾರತದಲ್ಲಿ 12 ಸಾವಿರಕ್ಕೂ ಅಧಿಕ ಹೆಸರೇ ಇಲ್ಲದ ಹಳ್ಳಿಗಳಿವೆಯಂತೆ. ಅಂತಹ ಒಂದು ಅಡ್ರೆಸ್ ಇಲ್ಲದ ಕುಗ್ರಾಮದ, ಗುರತೇ ಇಲ್ಲದ ಯುವಕ ತನ್ನ ಹಾಗೂ ತನ್ನೂರಿನ ಗುರುತಿಗಾಗಿ ಹೋರಾಡುವ ಕಥೆ "ಪೆದ್ದಿ'. "ಉಪ್ಪೇನಾ' ಮೂಲಕ ಚೊಚ್ಚಲ ನಿರ್ದೇಶನದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಬುಚ್ಚಿ ಬಾಬು ಸನಾ, ಅದಾಗಿ ಐದು ವರ್ಷಗಳ ಬಳಿಕ ಆ್ಯಕ್ಷನ್&ಕಟ್ ಹೇಳಿರುವ ಚಿತ್ರವಿದು. ಹಾಗೇ ರಾಜಮೌಳಿ ಸೃಷ್ಟಿಸಿದ್ದ "ಆರ್ಆರ್ಆರ್' ಪ್ರಪಂಚಕ್ಕೆ ಕರೆದೊಯ್ದಿದ್ದ ನಟ ರಾಮಚರಣ್ ತೇಜಾ, "ಪೆದ್ದಿ' ಚಿತ್ರದಲ್ಲಿ ನಿಜಕ್ಕೂ "ಗೇಮ್ ಚೇಂಜರ್' ಆಗಿದ್ದಾರೆ. ಏಕೆಂದರೆ, ಇಲ್ಲಿ ಅವರು ಇನ್ನೊಂದು ಹೊಸ ಪ್ರಪಂಚವನ್ನು ಪರಿಚಯಿಸಿದ್ದಾರೆ. ಹಾಗಾದರೆ ಹೇಗಿದೆ "ಪೆದ್ದಿ'?
2016ರ ಒಲಿಂಪಿಕ್ಸ್ನಲ್ಲಿ ಭಾರತ ಎರಡು ಪದಕ ಪಡೆದ ಸಂಭ್ರಮ ಅಧಿಕಾರಿಗಳದ್ದು. ಆದರೆ, ಕ್ರೀಡಾ ಸಚಿವರಿಗೆ 130 ಕೋಟಿ ಜನಸಂಖ್ಯೆಯಿರುವ ದೇಶಕ್ಕೆ ಎರಡೇ ಪದಕ ಎಂಬ ಬೇಸರ. ಹೀಗಾಗಿ ಹೊಸ ಪ್ರತಿಭೆಗಳನ್ನು ಹುಡುಕಲು ಹೊರಡುವ ಕ್ರೀಡಾ ಪ್ರಾಧಿಕಾರದ ಅಧಿಕಾರಿಗೆ (ಬೊಮನ್ ಇರಾನಿ) ಆಂಧ್ರ ಪ್ರದೇಶದ ವಿಜಯನಗರಂನ ಕ್ರೀಡಾ ಜಾತ್ರೆಗೆ ತೆರಳುತ್ತಾನೆ. ಅಲ್ಲಿ ಕ್ರಿಕೆಟ್, ಕುಸ್ತಿ, ಓಟ... ಹೀಗೆ ಯಾವ ಕ್ರೀಡಾಪಟುವನ್ನು ಕರೆದು ಕೇಳಿದರೂ ಎಲ್ಲರಿಗೂ "ಪೆದ್ದಿ'ಯೇ ೇವರಿಟ್. ಹಾಗಾದರೆ, ಯಾರಾತ? ಎಂದು ಹುಡುಕುತ್ತಾ ಹೆಸರೇ ಇಲ್ಲ ಬೆಟ್ಟದ ಕೆಳಗಿನ ಊರಿಗೆ ಹೊರಡುತ್ತಾನೆ. ರೈಲಿನಲ್ಲಿ ಅರ್ಧ ಗಂಟೆಗೆ ತಲುಪಬಹುದಾದ ಊರದು. ಆದರೆ, ನಿಲ್ದಾಣವಿಲ್ಲದ ಕಾರಣ, ಒಂದು ದಿನ ಪೂರ್ತಿ ಬೆಟ್ಟ, ಗುಡ್ಡ ಹತ್ತಿಳಿದು ನಡೆಯಬೇಕಾದ ದುಸ್ಥಿತಿ. ಆ ಪೆದ್ದಿಯದು ಬೆಲ್ಲದ ಕಾರ್ಖಾನೆಯಲ್ಲಿ ಕೆಲಸ. "ಏನೇ ಇದ್ದರೂ, ಎಷ್ಟೇ ಕಷ್ಟವಾದರೂ, ಭೂಮಿ ಮೇಲಿದ್ದಾಗಲೇ ಮಾಡಿಬಿಡಬೇಕು. ಮತ್ತೆ ಹುಟ್ಟುತ್ತೀವೋ ಹೇಗೆ?' ಅಂತ ನಂಬುವವನು. ಕೆಲಸದ ಕೂಲಿಯಂತೆಯೇ ಆತ ಆಟಕ್ಕೂ ಕೂಲಿ. ಹರಾಜು ಕೂಗಿ ತಂಡಕ್ಕೆ ಸೇರಿಸಿಕೊಂಡು ಆಡಿಸುವಷ್ಟು ಅದ್ಭುತ ಬ್ಯಾಟರ್ ಪೆದ್ದಿ. ಇಂತಹ ಪೆದ್ದಿಗೆ ಮೈದಾನದಲ್ಲಿ ಅವಮಾನವಾಗುವ ಕಾರಣ ಸೀದಾ ಗರಡಿ ಮನೆಗೆ ಬರುತ್ತಾನೆ. ಗೌರ್ನಾಯ್ಡು (ಶಿವಣ್ಣ) ಬಳಿ ಕುಸ್ತಿ ತರಬೇತಿ ಪಡೆಯುತ್ತಾನೆ. ಅದೇ ಸಮಯದಲ್ಲಿ ಊರಿಗೆ ರೈಲ್ವೆ ಸ್ಟೇಷನ್ ಬೇಕೆಂದು ಓಡಾಡುವ ಆತನಿಗೆ ಊರಿಗೆ, ತನಗೆ ಗುರುತಿದ್ದರಷ್ಟೇ ಸಮಾಜ, ಸರ್ಕಾರ ಗುರುತಿಸುವುದು ಅಂತ ಗೊತ್ತಾಗಿ, ಗುರುತಿಗಾಗಿ ಹೋರಾಟಕ್ಕಿಳಿಯುತ್ತಾನೆ. ಆ ರೋಚಕ ಹೋರಾಟವೇ "ಪೆದ್ದಿ'.
"ಪೆದ್ದಿ'ಯ ಪ್ರಮುಖ ಹೈಲೈಟ್ ನಾಯಕ ರಾಮಚರಣ್ ತೇಜ. ಕ್ರಿಕೆಟರ್, ಕುಸ್ತಿಪಟು, ಕ್ರೀಡಾಪಟು... ಹೀಗೆ ಮೂರ್ನಾಲ್ಕು ಲುಕ್ಗಳಲ್ಲಿ ಗಮನ ಸೆಳೆಯುತ್ತಾರೆ. ಕ್ಲೆಮ್ಯಾಕ್ಸ್ ಮೋನೋಲಾಗ್ ಕೂಡ ಚಿತ್ರದ ಕೇಂದ್ರಬಿಂದು. ಹಾಡುಗಳು ಈಗಾಗಲೇ ವೈರಲ್ ಆಗಿದ್ದು, ಎ.ಆರ್.ರೆಹ್ಮಾನ್ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಗ್ರಾಮೀಣ ಸೊಗಡಿನ ಕಥೆಯನ್ನು ಛಾಯಾಗ್ರಾಹಕ ರತ್ನವೇಲು ಅಂದವಾಗಿ ತೆರೆಗೆ ತಂದಿದ್ದಾರೆ. ಇನ್ನು ರಾಮಚರಣ್ ಮತ್ತು ಶಿವಣ್ಣ ಕನ್ನಡದಲ್ಲೂ ಡಬ್ಬಿಂಗ್ ಮಾಡಿರುವುದು ಪ್ಲಸ್ ಪಾಯಿಂಟ್. ಹಾಗಂತ ಚಿತ್ರದಲ್ಲಿ ಏನೂ ನೆಗೆಟಿವ್ ಇಲ್ಲ ಅಂತಲ್ಲ. ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಜಾನರ್ ಕಥೆಗೆ ಬುಚ್ಚಿ ಬಾಬು ಸನಾ ಬರೋಬ್ಬರಿ 189 ನಿಮಿಷಗಳ ಸಿನಿಮಾ ರೂಪ ನೀಡಿದ್ದು, ಕೆಲವೆಡೆ ಸುದೀರ್ಘವೆನಿಸುತ್ತದೆ. ರೈಲಿನ ವಿಎಫ್ಎಕ್ಸ್ ಬಹುತೇಕ ಕಡೆಗಳಲ್ಲಿ ಕೃತಕ ಎನ್ನಿಸುತ್ತದೆ. ನಾಯಕಿ ಜಾಹ್ನವಿ ಕಪೂರ್ರನ್ನು ಕೇವಲ ಮಸಾಲಾ ಸೇರಿಸಲು ಬಳಸಿಕೊಂಡಂತಿದೆ. ಹೆಣ್ಣನ್ನು ಭೋಗದ ವಸ್ತುವಿನಂತೆ ತೋರಿಸಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು. ಅಂತಹ ನಕಾರಾತ್ಮಕ ವಿಷಯಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ, "ಪೆದ್ದಿ' ಒಂದೊಳ್ಳೆ ಸಾಮಾಜಿಕ ಬದಲಾವಣೆಗೆ ನಾಂದಿಯಾಗುವ ಸಿನಿಮಾ ಅಂದರೂ ತಪ್ಪಲ್ಲ.