ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಧರ್ಮ ಸಮಾರಂಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ ವರ್ಷದ ವಾರ್ತಾ ಸಂಕಲನವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಚಂದ್ರಶೇಖರ ಸ್ವಾಮಿ, ವೀರರಾಜೇಂದ್ರ ಸ್ವಾಮಿ, ಶಿವಯೋಗಿ ಶಿವಾಚಾರ್ಯರು, ಡಾ.ಎಂ. ಶಿವಶಂಕರಯ್ಯ ಇತರರಿದ್ದರು.  
ನ್ಯೂಸ್

ಆದರ್ಶಕ್ಕಾಗಿ ಬದುಕಿದಲ್ಲಿ ಜೀವನ ಸಾರ್ಥಕ

ಬಾಳೆಹೊನ್ನೂರು: ಮನುಷ್ಯನಲ್ಲಿ ಆಸೆ, ಆಕಾಂಕ್ಷೆಗಳು ಸಹಜ. ಆದರೆ ಆಸೆಗಳಿಗಾಗಿ ಬದುಕದೇ ಆದರ್ಶಗಳಿಗಾಗಿ ಬದುಕಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಂತೋಷದಿಂದ ಬದುಕಲು ಮನುಷ್ಯ ಪ್ರಯತ್ನಿಸಬೇಕು. ನೀತಿ ನಿಯಮ ಇಲ್ಲದೆ ಸಮಾಜ ಬೆಳೆಯಲಾರದು. ಸಂಜೆಯಾದಂತೆ ಸೂರ್ಯ ಮಾತ್ರ ಮುಳುಗುವುದಿಲ್ಲ. ನಮ್ಮ ವಯಸ್ಸಿನ ಒಂದು ದಿನ ಕಡಿಮೆಯಾಗುತ್ತದೆ. ಒಳ್ಳೆಯ ಸಂಸ್ಕಾರ ಪಡೆದರೆ ಜೀವನದಲ್ಲಿ ಸಲರಾಗುತ್ತೇವೆ. ಮನಃಶಾಂತಿಯಿಲ್ಲದ ಸಂಪತ್ತು, ಆರೋಗ್ಯ ಇಲ್ಲದ ಆಯುಷ್ಯ, ಅರ್ಥ ಮಾಡಿಕೊಳ್ಳದ ಸಂಬಂಧ, ಅಕ್ಕರೆಯಿಲ್ಲದ ವ್ಯಾವಹಾರಿಕ ಸ್ನೇಹದಿಂದ ಯಾವ ಪ್ರಯೋಜನವೂ ಇರುವುದಿಲ್ಲ. ದೀರ್ಘವಾದ ಜೀವನ ಮುಖ್ಯವಲ್ಲ. ದಿವ್ಯವಾದ ಜೀವನ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.
ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ಮಾತನಾಡಿ, ಬಿತ್ತಿದ ಬೀಜದಂತೆ ಸಲು ಹೇಗೋ ಹಾಗೆಯೇ ನಮ್ಮ ಆಚರಣೆಯಂತೆ ಲ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಹುಡಗಿ ಹಿರೇಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಗುರುವಿಲ್ಲದೆ ಅರಿವು ಮೂಡದು. ವಿದ್ಯೆ, ಬುದ್ಧಿ ಸಿದ್ಧಿಸದು. ಸನ್ನಡತೆ, ವಿನಯ, ವಿಧೇಯತೆ ಬೆಳೆಯಲು ಸಾಧ್ಯವಿಲ್ಲ. ಶಿವಪಥವನ್ನರಿಯಲು ಗುರುವಿನ ಮಾರ್ಗದರ್ಶನ ಅವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ ವರ್ಷದ ವಾರ್ತಾ ಸಂಕಲನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ನಾಲವಾರ ಆದಿಶೇಷ ಹಿರೇಮಠದ ಚಂದ್ರಶೇಖರ ಸ್ವಾಮಿ, ಸಿಂದಗಿಯ ವೀರರಾಜೇಂದ್ರ ಸ್ವಾಮಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಹೊನ್ನಾಳಿಯ ಡಾ. ಎಂ.ಶಿವಶಂಕರಯ್ಯ, ಹಾವೇರಿಯ ಎಸ್.ಎನ್.ಹಿರೇಮಠ ಹಾಗೂ ಯಡ್ರಾಮಿ ಚಂದ್ರಶೇಖರ ಪುರಾಣಿಕಮಠ, ಗುರುಕುಲದ ಸಿದ್ಧಲಿಂಗಯ್ಯ ಹಿರೇಮಠ, ಜಮಖಂಡಿಯ ರೇವಣಯ್ಯಸ್ವಾಮಿ, ಕುರುಗೋಡಿನ ಯರಿಸ್ವಾಮಿ, ವಿಶ್ವನಾಥಸ್ವಾಮಿ ಮತ್ತಿತರರಿದ್ದರು.