ಬೆಂಗಳೂರು:
ವಿಶ್ವ ಪಾರ್ಶ್ವವಾಯು ದಿನಾಚರಣೆಯ ಪ್ರಯುಕ್ತ ರಾಮಯ್ಯ ಸ್ಮಾರಕ ಆಸ್ಪತ್ರೆಯು ರಾಮಯ್ಯ ಪಾರ್ಶ್ವವಾಯು ಕೇಂದ್ರವನ್ನು ಆರಂಭಿಸಿದೆ.
ಪಾರ್ಶ್ವವಾಯು ಕೇಂದ್ರವನ್ನು ಉದ್ಘಾಟಿಸಿದ ರಾಮಯ್ಯ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಸಿ.ನಾಗೇಂದ್ರ ಸ್ವಾಮಿ ಮಾತನಾಡಿ, ನಮ್ಮ ದೇಶದಲ್ಲಿ 1ಲಕ್ಷ ಜನರ ಪೈಕಿ 138 ಜನರಿಗೆ ಪಾರ್ಶ್ವವಾಯು ಸಂಭವಿಸುತ್ತಿದೆ. ಇತ್ತೀಚಿಗೆ ಲಾಕೆಂಟ್ ಸೌತ್ ಈಸ್ಟ್ ಏಷಿಯಾ ನಡೆಸಿದ ಸಂಶೋಧನೆಯ ಪ್ರಕಾರ ಪಾರ್ಶ್ವವಾಯು ಸಂಭವಿಸಿದ ತಕ್ಷಣ ಚಿಕಿತ್ಸೆ ಆರಂಭಿಸಿದರೆ, ಮುಂದೆ ಧೀರ್ಘಾವಧಿಯಲ್ಲಿ ಸಂಭವಿಸಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಪಾರ್ಶ್ವವಾಯುವಿನಿಂದ ಸಂಭವಿಸಬಹುದಾದ ಸಾವು ಮತ್ತು ಅಂಗವೈಕಲ್ಯತೆಯನ್ನು
ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ವಿಶೇಷ ಮತ್ತು ಬಹುಶೀಸ್ತೀಯ, ಸೂಕ್ತ ಪತ್ತೆ ಹಚ್ಚುವ ಕಾರ್ಯದ ಅವಶ್ಯಕತೆ ಇದೆ. ಇದಕ್ಕಾಗಿಯೇ ನಾವು 6 ಐಸಿಯು ಬೆಡ್‌ಗಳನ್ನು ಮೀಸಲಿಟ್ಟಿದ್ದೇವೆ. ಇದರಿಂದ ಪ್ರತಿಯೊಬ್ಬರಿಗೂ ಗುಣಮಟ್ಟವಾದ ಚಿಕಿತ್ಸೆಯನ್ನು ನಾವು ನೀಡುತ್ತೇವೆ ಎಂದರು.
ಪಾರ್ಶ್ವವಾಯು ಸಂಭವಿಸಿದ ವೇಳೆಯಲ್ಲಿ ಅನುಸರಿಸಬೇಕಾದ ವಿಷಯ ಕುರಿತು ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಅರುಣಾ ಡಿ.ರಮೇಶ್ ಮಾತನಾಡಿದರು.
ಆಸ್ಪತ್ರೆಯ ಸಿಒಒ ಡಾ.ಮದನ್ ಎಸ್.ಗಾಯಕವಾಡ್, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ
ಮುಖ್ಯಸ್ಥರಾದ ಡಾ.ಅರುಣಾ ಡಿ.ರಮೇಶ್, ನರವಿಜ್ಞಾನ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ವಿ.ಫರ್ಟಾಡೋ, ನರರೋಗಶಾಸ್ತ ವಿಭಾಗದ ಮುಖ್ಯಸ್ಥರಾದ ಜೆ.ವಿ.ಮಹೇಂದ್ರ ಸೇರಿದಂತೆ ರಾಮಯ್ಯ ನರವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
ರಾಜ್ಯ ಮಟ್ಟದಲ್ಲೇ ಉತ್ತಮ ಗುಣಮಟ್ಟತೆಯನ್ನು ಹೊಂದಿದ್ದು, 24 ಗಂಟೆಗಳ ಕಾಲ ಪಾರ್ಶ್ವವಾಯು ನಿರ್ವಹಣೆ ಮಾಡುವ ಸಮಗ್ರ ಚಿಕಿತ್ಸೆ ದೊರೆಯುವ ಕೇಂದ್ರ ಇದಾಗಿದೆ.
ಆಸ್ಪತ್ರೆಯ ಆವರಣದಲ್ಲೇ ನ್ಯೂರೋ ಇನ್‌ಟೆನ್ಸಿವ್ ಕೇರ್ ಯೂನಿಟ್(ಎನ್‌ಐಸಿಯು) ಅನ್ನು ಇದು ಹೊಂದಿದೆ.