Ramayana Part One: ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿರುವ ಈ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರತಂಡ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿದ್ದು, ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ ಹಾಗೂ ನಮಿತ್ ಮಲ್ಹೋತ್ರಾ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಚಿತ್ರದ ಎರಡು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಮೊದಲ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ವನವಾಸದ ಸಂದರ್ಭದಲ್ಲಿ ಮೂವರೂ ಸರಳ ಉಡುಗೆಯಲ್ಲಿ ಒಟ್ಟಿಗೆ ನಿಂತಿರುವ ದೃಶ್ಯ ಗಮನ ಸೆಳೆಯುತ್ತದೆ. ‘ಯಾವಾಗಲೂ ಒಟ್ಟಾಗಿ, ಧರ್ಮದ ಹಾದಿಯಲ್ಲಿ’ ಎಂಬ ಸಾಲಿನೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್, ರಾಮ-ಸೀತೆ-ಲಕ್ಷ್ಮಣರ ಬಾಂಧವ್ಯವನ್ನು ತೆರೆದಿಡುತ್ತದೆ.
ಇನ್ನೊಂದು ಪೋಸ್ಟರ್‌ನಲ್ಲಿ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದು, ಕಪ್ಪು-ಚಿನ್ನದ ವಸ್ತ್ರದಲ್ಲಿ ಲಂಕೆಯ ವೈಭವಯುತ ಅರಮನೆಯ ಮುಂದೆ ನಿಂತಿದ್ದಾರೆ. ‘ಮೂರು ಲೋಕಗಳ ಅಧಿಪತಿ, ರಾವಣ’ ಎಂಬ ಸಾಲಿನೊಂದಿಗೆ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ‘ನಮ್ಮ ಸತ್ಯ. ನಮ್ಮ ಇತಿಹಾಸ.’ ಎಂಬ ಬರಹವನ್ನೂ ನೀಡಿದೆ.
ಪೋಸ್ಟರ್‌ಗಳು ಬಿಡುಗಡೆಯಾದ ಬೆನ್ನಲ್ಲೇ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಮ ಮತ್ತು ರಾವಣನ ವಿಭಿನ್ನ ಲುಕ್‌ಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ಸನ್ನಿ ಡಿಯೋಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಅರುಣ್ ಗೋವಿಲ್, ಕುನಾಲ್ ಕಪೂರ್ ಹಾಗೂ ಅದಿನಾಥ್ ಕೊಠಾರೆ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ ಒನ್’ 2026ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.(ಏಜೆನ್ಸೀಸ್)