ವಾಲ್ಮೀಕಿ ಜಯಂತಿ ಉದ್ಘಾಟಿಸಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಎಸ್.ಎನ್.ಚನ್ನಬಸಪ್ಪ, ಡಾ.ಧನಂದಜಯ ಸರ್ಜಿ, ಗುರುದತ್ತ ಹೆಗಡೆ, ಜಿ.ಕೆ.ಮಿಥುನ್‌ಕುಮಾರ್, ಎಚ್.ಟಿ.ಬಳಿಗಾರ್ ಮುಂತಾದವರಿದ್ದರು.  
ನ್ಯೂಸ್

ತತ್ವದಿಂದ ದೈವತ್ವಕ್ಕೆ ಏರಿದ ಕೃತಿ ರಾಮಾಯಣ

ಶಿವಮೊಗ್ಗ: ಮಹಾಕಾವ್ಯ ರಾಮಾಯಣದ ವಿಶೇಷತೆ ಮತ್ತು ಶತಮಾನಗಳಿಂದ ಅದು ಗಳಿಸಿರುವ ಜನಪ್ರಿಯತೆ ಕಾರಣದಿಂದ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಕವಿಕುಲ ಸಾರ್ವಭೌಮರಾಗಿ ಗುರುತಿಸಲ್ಪಡುತ್ತಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತದಿಂದ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ತತ್ವದಿಂದ ದೈವತ್ವಕ್ಕೆ ಏರಿದ ತಮ್ಮ ಕೃತಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ವಾಲ್ಮೀಕಿ. ಬೇಡರಾಗಿದ್ದ ಅವರು ಬಳಿಕ ಸಂತರಾಗಿ, ಅಹಿಂಸೆಯ ಪ್ರತಿಪಾದಕರಾಗಿ ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಎಂದು ತಿಳಿಸಿದರು.
ಪ್ರಪಂಚದ ವಿವಿಧ ಭಾಷೆಗಳಿಗೆ ವಾಲ್ಮೀಕಿ ಸಾಹಿತ್ಯ ಅನುವಾದಗೊಂಡಿದೆ. ವಿಶ್ವದ ಅನೇಕ ವಿವಿಗಳಲ್ಲಿ ಪಠ್ಯಗಳಾಗಿವೆ. ಅವರ ಸಂದೇಶಗಳನ್ನು ಓದುವ ಮೂಲಕ ಅಸಂಖ್ಯಾತ ಮಂದಿ ವಾಲ್ಮೀಕಿಯವರು ಹಾಕಿಕೊಟ್ಟ ಮೇಲ್ಪಂಕ್ತಿ ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ.ಮೋಹನ್ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅವರನ್ನು ಕವಿಯಾಗಿ, ಇತಿಹಾಸಕಾರನಾಗಿ, ಮನಃಶಾಸ್ತ್ರಜ್ಞನಾಗಿ ನೋಡಬೇಕು. ರಾಮಾಯಣ ವೈಭವೀಕರಣದ ಕೃತಿಯಲ್ಲ. ವಾಸ್ತವ ಆಧಾರಿತ ಕೃತಿ. ಸಾಮಾಜಿಕ ಸ್ಥಿತಿಗತಿಗಳ, ರಾಮ, ಸೀತೆ, ಲಕ್ಷ್ಮಣರ ಜೀವನ ಹಾಗೂ ವ್ಯಕ್ತಿತ್ವವನ್ನು ಆಧ್ಯಾತ್ಮಿಕ ಕಥನದ ಮೂಲಕ ಜಗತ್ತಿಗೆ ಅರ್ಪಿಸಲಾಗಿದೆ ಎಂದು ಹೇಳಿದರು.
ಯುವಜನತೆ ವಾಲ್ಮೀಕಿ, ಮದಕರಿ ನಾಯಕರನ್ನು ಆದರ್ಶವಾಗಿಸಿಕೊಳ್ಳಬೇಕು. ತಂದೆ, ತಾಯಿಯರನ್ನು ಗೌರವದಿಂದ ಕಾಣಬೇಕು. ವಾಲ್ಮೀಕಿ, ಅಂಬೇಡ್ಕರ್ ಅವರನ್ನು ದೇವರನ್ನಾಗಿಸುವುದು ಬೇಡ. ಅವರ ಜೀವನ, ಮೌಲ್ಯಗಳನ್ನು ಪಾಲಿಸುವ ಮೂಲಕ ನಮ್ಮ ಬದುಕಿಗೆ ದೀಪವನ್ನಾಗಿಸಿಕೊಳ್ಳಬೇಕೆಂದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಮಾತನಾಡಿ, ಒಬ್ಬ ಸಾಮಾನ್ಯವ್ಯಕ್ತಿ ಮಹಾಕವಿಯಾಗಿ ಪ್ರಪಂಚಕ್ಕೆ ಅದ್ಬುತ ಗ್ರಂಥವನ್ನು ನೀಡಿ ಶ್ರೇಷ್ಠರಾಗಿ ಗುರುತಿಸಿಕೊಂಡವರು ಮಹರ್ಷಿ ವಾಲ್ಮೀಕಿ. ರಾಮಾಯಣ, ಮಹಾಭಾರತದಲ್ಲಿನ ಆದರ್ಶಗಳನ್ನು ನಮ್ಮ ಜೀವನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ವಾಲ್ಮೀಕಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿಗೆ ಪ್ರಭು ರಾಮನ ದರ್ಶನವನ್ನು ಪರಿಚಯಿಸಿದವರು ವಾಲ್ಮೀಕಿ. ಇಡೀ ಜಗತ್ತಿಗೆ ಭಾರತದ ಶಕ್ತಿಯನ್ನು ತೊರಿಸಿಕೊಟ್ಟವರು. ರಾಮನ ಬಗ್ಗೆ ಅನೇಕ ಸಂಗತಿಗಳ ಕುರಿತು ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ರಾಮಾಯಣದ ಮೂಲಕ ವಿವರಿಸಿದ್ದಾರೆ ಎಂದರು.
ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಎಚ್.ಟಿ.ಬಳಿಗಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮುಂತಾದವರಿದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಿಂದ ಕುವೆಂಪು ರಂಗಮಂದಿರದವರೆಗೆ ಕಲಾತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.