ರಾಮನಗರ: ಸಾಧನೆಗೆ ಗುರಿ ಇರಬೇಕು, ಜತೆಗೆ ನಿರಂತರ ಪ್ರಯತ್ನ ಇದ್ದರೆ ಸೋಲುಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರವೇರಬಹುದು ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು.
ಪ್ರತಿಯೊಂದು ಸ್ಪರ್ಧೆಯೂ ಒಂದೊಂದು ಪಾಠ ಕಲಿಸುತ್ತದೆ, ಕೌಶಲ ಹೆಚ್ಚಿಸುತ್ತದೆ. ಪ್ರತಿಭೆ ಎಂಬುದು ಸುಲಭವಾಗಿ ಸಿಗುವ ವಸ್ತುವಲ್ಲ. ಪ್ರತಿಭೆಗೆ ನಿರಂತರ ಪರಿಶ್ರಮ ಬೇಕು, ಪರಿಶ್ರಮದಿಂದ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದರು.
ಥಾಮಸ್ ಆಲ್ವ ಎಡಿಸನ್ ವಿದ್ಯುತ್ ಬಲ್ಬ್ ಆವಿಷ್ಕರಿಸುವ ಸಂದರ್ಭದಲ್ಲಿ 300 ಬಾರಿ ವಿಲರಾಗಿದ್ದರು, ಆವಿಷ್ಕಾರಗಳು ಆಕಸ್ಮಿಕವಲ್ಲ ನಿರಂತರ ಪ್ರತಿಶ್ರಮದ ಲ. ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪ್ರತಿಭಾವಂತರ ಜತೆ ಚರ್ಚಿಸಿ ಒಂದೇ ದಿನದಲ್ಲಿ ಪ್ರಸಿದ್ಧಿ ಪಡೆದವರೂ ಅಲ್ಲ. ಪ್ರತಿಭಾವಂತರು ಹೇಳುವುದು ಶ್ರಮದ ಪಾಲು ಶೇ.99 ಮತ್ತು ಅದೃಷ್ಟ ಶೇ.1ರಷ್ಟು ಮಾತ್ರ. ಆತ್ಮವಿಶ್ವಾಸ, ಪ್ರತಿ ಸೋಲಿನಲ್ಲೂ ಪಾಠ ಕಲಿಯುವ ವ್ಯಕ್ತಿತ್ವ, ಸ್ಪರ್ಧಾ ಮನೋಭಾವ ಹಾಗೂ ಪರಿಶ್ರಮವನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ನಟರಾಜನ್ ಮಾತನಾಡಿ, ಭಾರತ ಮಾನವ ಸಂಪನ್ಮೂಲ ಹೇರಳವಾಗಿದೆ. 15-29 ವರ್ಷದೊಳಗಿನ 45 ಕೋಟಿಗೂ ಹೆಚ್ಚು ಮಂದಿ ಇರುವುದರಿಂದ ಭಾರತವನ್ನು ಯುವಶಕ್ತಿಯ ದೇಶ ಎನ್ನುತ್ತಾರೆ. ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಯುವ ಶಕ್ತಿಯಲ್ಲಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಯುವ ಜನೋತ್ಸವ ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಹಾಗೂ ನಶಿಸಿ ಹೋಗುತ್ತಿರುವ ಕಲೆ ಹಾಗೂ ಕ್ರೀಡೆಗಳನ್ನು ಪೋಷಿಸುವ ಜವಾಬ್ದಾರಿ ಕೂಡ ಯುವ ಸಮುದಾಯದ ಮೇಲಿದೆ ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ, ಯುವ ಬ್ರಿಗೇಡ್‌ನ ಡಾ. ಬಾಲಾಜಿ ಮುಂತಾದವರು ಇದ್ದರು.