ಮಾಗಡಿ
ಗಟ್ಟಿಪುರ, ಗೆಜ್ಜಾರುಗುಪ್ಪೆ ಗಡಿ ನಕಾಶೆ ರಸ್ತೆ ತೆರವುಗೊಳಿಸುವಂತೆ ಒತ್ತಾಯಿಸಿ ಗಟ್ಟಿಪುರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೋಷಿಯಲ್ ಮೀಡಿಯಾ ರಾಜ್ಯ ಸಂಯೋಜಕ ಜಿ.ಆರ್.ಮಧು ಮಾತನಾಡಿ, ನೂರಾರು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ನಕಾಶೆ ರಸ್ತೆಯಲ್ಲಿಯೇ ಓಡಾಡುತ್ತಿದ್ದರು. ಇತ್ತೀಚೆಗೆ ಬಲಾಢ್ಯರು ಈ ರಸ್ತೆಯನ್ನು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ರೈತರು ಕಂಗಾಲಾಗಿದ್ದಾರೆ. ತಹಸೀಲ್ದಾರ್ ಸೂಚನೆಯಂತೆ ಮೂರು ಬಾರಿ ಸರ್ವೇ ಅಧಿಕಾರಿಗಳು ಅಳತೆ ಮಾಡಿದ್ದರೂ ತೆರವುಗೊಳಿಸಿಲ್ಲ ಎಂದು ದೂರಿದರು.
ಸರ್ವೇ ನಂ.49ರಲ್ಲಿ ಪುರಾತನ ಸೋಮೇಶ್ವರ ದೇವಾಲಯವಿದೆ. ನೂರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಈಗ ರಸ್ತೆಯನ್ನು ಒತ್ತುವರಿ ಮಾಡಿರುವುದರಿಂದ 2.5 ಕಿ.ಮೀ. ಸುತ್ತಿ ದೇವಾಲಯ ಹಾಗೂ ಹೊಲಗದ್ದೆಗಳಿಗೆ ತೆರಳುವಂತಾಗಿದೆ. ಕೃಷಿ ಕಾರ್ಯ ಮಾಡಲಾಗದೆ ಗೆಜ್ಜಗಾರು ಗುಪ್ಪೆಯ 50 ಕುಟುಂಬಗಳ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ನ್ಯಾಯ ಕೊಡಿಸುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ತಹಸೀಲ್ದಾರ್ ಮತ್ತು ಎಡಿಎಲ್ಆರ್‌ಗೆ ಸೂಚನೆ ನೀಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಸರ್ವೇ ನಡೆಸಿ ರೈತರಿಗೆ ನಕಾಶೆ ರಸ್ತೆ ಬಿಡಿಸಿಕೊಡುವ ಮೂಲಕ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಗ್ರಾಮಸ್ಥರೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ. ಶಿವಲಿಂಗಯ್ಯ ಮಾತನಾಡಿ, ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಮುತುವರ್ಜಿ ತೋರಲಿಲ್ಲ. ಹಾಲಿ ಶಾಸಕರು ನ್ಯಾಯ ಒದಗಿಸುವ ಭರವಸೆ ಭರವಸೆ ನೀಡಿದ್ದಾರೆ. ಸೋಮವಾರ ಸರ್ವೇ ಕಾರ್ಯಕ್ಕೆ ಬರುವುದಾಗಿ ಹೇಳಿದ್ದ ಅಧಿಕಾರಿಗಳು ಬಂದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ರೈತರಾದ ಕುಮಾರಸ್ವಾಮಿ, ಶಿವಕುಮಾರ್, ಮುದ್ದಬಸವಯ್ಯ, ನಾಗಮ್ಮ, ಲೋಕೇಶ್, ವಿಜಯಮ್ಮ, ಚಂದ್ದಯ್ಯ, ಬಸವರಾಜು, ಗಿರಿಜಮ್ಮ ಮಲ್ಲಯ್ಯ, ಶಿವಮಾದಯ್ಯ ಮುಂತಾದವರು ಹಾಜರಿದ್ದರು.
ತನಿಖೆಗೆ ಆಗ್ರಹ
ಬಲಾಢ್ಯರು ಗೋಮಾಳ ಭೂಮಿಯನ್ನು ಅಕ್ರಮಿಸಿಕೊಂಡಿದ್ದು, ಅವರಿಗೆ ಸ್ಥಳೀಯ ಮುಖಂಡರೊಬ್ಬರು ಖಾತೆ ಮಾಡಿಸಿಕೊಡುವ ಯತ್ನ ನಡೆಯುತ್ತಿದೆ. ಹಲವು ವರ್ಷಗಳಿಂದ ಗೋಮಾಳ ಉಳುಮೆ ಮಾಡುತ್ತಿರುವ ರೈತರಿಗೆ ಇದುವರೆಗೂ ಸಾಗುವಳಿ ಚೀಟಿ ಸಿಕ್ಕಿಲ್ಲ. ಆದರೆ, ಬಲಾಢ್ಯರಿಗೆ ಗೋಮಾಳ ಭೂಮಿ ಹೇಗೆ ಖಾತೆಯಾಗುತ್ತಿದೆ ಎಂದು ಪ್ರಶ್ನಿಸಿದ ರೈತ ಶಿವಲಿಂಗಯ್ಯ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಗ್ರಹಿಸಿದರು.