ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ, ಶಾಶ್ವತ ಅಂಗವೈಕಲ್ಯ, ಭಾಗಶಃ ಗಾಯಗೊಂಡವರಿಗೆ, ಆಸ್ತಿ-ಪಾಸ್ತಿ ನಷ್ಟಕ್ಕೆ ನೀಡುವ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸುವ ಮೂಲಕ ಅರಣ್ಯ ಇಲಾಖೆ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಆನೆ, ಚಿರತೆ, ಕರಡಿಗಳ ದಾಳಿಯಿಂದ ಜನ ಗಾಯಗೊಳ್ಳುವುದು, ಮೃತಪಡುವ ಪ್ರಕರಣಗಳು ಕಂಡುಬರುತ್ತಿದೆ. ಇಂತಹ ಪ್ರಕರಣಗಳಲ್ಲಿ ಗಾಯಗೊಂಡವರಿಗೆ, ಅಂಗವಿಕಲತೆ ಹೊಂದಿದವರಿಗೆ, ಮರಣ ಹೊಂದಿದವರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಜನರು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರು. ಇದಕ್ಕೆ ಸ್ಪಂದಿಸಿರುವ ಇಲಾಖೆ ಈಗ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲೂ ಆನೆ, ಕರಡಿ, ಚಿರತೆ ದಾಳಿಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಯಾವ ಹಾನಿಗೆ ಎಷ್ಟು ಪರಿಹಾರ? ಈ ಹಿಂದೆ ಆನೆ ಸೇರಿ ಇತರ ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಪ್ರಾಣ ಹಾನಿಗೆ ಕೊಡುತ್ತಿದ್ದ 7.50 ಲಕ್ಷ ರೂ. ಪರಿಹಾರ ಮೊತ್ತವನ್ನು ಈಗ 15 ಲಕ್ಷ ರೂ. ಗಳಿಗೆ. ಶಾಶ್ವತ ಅಂಗವೈಕಲ್ಯ ಹೊಂದಿದವರಿಗೆ ನೀಡುತ್ತಿದ್ದ 5 ಲಕ್ಷ ರೂ. ಗಳನ್ನು 10 ಲಕ್ಷ ರೂ.ಗೆ, ಭಾಗಶಃ ಅಂಗವಿಕಲತೆಗೆ 2.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ, ಗಾಯಾಳುಗಳಿಗೆ ನೀಡುತ್ತಿದ್ದ 30 ಸಾವಿರ ರೂ.ಗಳನ್ನು 60 ಸಾವಿರ ರೂ., ಆಸ್ತಿ ನಷ್ಟಕ್ಕೆ 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಏರಿಸಲಾಗಿದೆ.
ಮಾಸಾಶನವೂ ಹೆಚ್ಚಳ
ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರದ ಜತೆಗೆ 5 ವರ್ಷಗಳವರೆಗೆ ನೀಡುತ್ತಿದ್ದ 2 ಸಾವಿರ ರೂ. ಮಾಸಾಶನವನ್ನು 4 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಮಾನವ ಪ್ರಾಣ ಹಾನಿಗೆ ನೀಡುವ ಪರಿಹಾರವನ್ನು ಘಟನೆ ಸಂಭವಿಸಿದ ತಕ್ಷಣ ಉಪ ಅರಣ್ಯಾಧಿಕಾರಿಗಳ ಮಟ್ಟದಲ್ಲಿಯೇ 5 ಲಕ್ಷ ರೂ. ನೀಡಬೇಕು ಹಾಗೂ ಉಳಿದ 10 ಲಕ್ಷ ರೂ. ಗಳನ್ನು ಉನ್ನತ ಅಧಿಕಾರಿಗಳ ಹಂತದಲ್ಲಿ ವಿಚಾರಣೆ ಖಚಿತಪಡಿಸಿಕೊಂಡ ನಂತರ ವಾರಸುದಾರರಿಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವನ್ಯಪ್ರಾಣಿಯಿಂದ ಹತ್ಯೆಯಾದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಹಾಗೂ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವ್ಯಕ್ತಿ ವನ್ಯಪ್ರಾಣಿಯಿಂದ ಮೃತನಾಗಿದ್ದಾನೆ ಎಂದು ದೃಢಪಟ್ಟರೆ ಮಾತ್ರ ಪರಿಹಾರ ಸಿಗಲಿದೆ. ಪ್ರಮಾಣಪತ್ರ ಆಧರಿಸಿ ಪರಿಹಾರ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ವ್ಯಕ್ತಿಗೆ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪರಿಹಾರ ಹಣದ ಜತೆಗೆ ಪ್ರತಿ ತಿಂಗಳು 5 ವರ್ಷಗಳವರೆಗೆ 4 ಸಾವಿರ ರೂ. ಮಾಸಾಶನ ಸಿಗಲಿದೆ.
ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಈ ಹಿಂದೆ ಕಾಡು ಪ್ರಾಣಿಗಳ ಹಾವಳಿಯಿಂದ ಆದ ಬೆಳೆ ನಷ್ಟಕ್ಕೆ ಡಿಸೆಂಬರ್ 15, 2022ರಂದು ಹೆಚ್ಚಿನ ಪರಿಹಾರ ನಿಗದಿ ಮಾಡಿ ಆದೇಶ ನೀಡಿತ್ತು. ಅದೇ ಆದೇಶಕ್ಕೆ ಸೇರ್ಪಡೆಗೊಳಿಸಿ ಮೇ 24ರಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ವನ್ಯಜೀವಿ ಪ್ರಾಣಹಾನಿ ಪ್ರಕರಣಗಳಿಗೆ ಹೆಚ್ಚಿನ ಪರಿಹಾರ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಆನೆಗಳ ಉಪಟಳ ಹೆಚ್ಚಿದೆ. ಅವುಗಳ ದಾಳಿಯಿಂದ ಎರಡು ವರ್ಷದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕರಡಿ, ಚಿರತೆ ದಾಳಿಗಳಿಂದಲೂ ಹಲವರು ಗಾಯಗೊಂಡಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಪರಿಹಾರ ಮೊತ್ತ ಹೆಚ್ಚಳ ಮಾಡಿರುವುದು ನೊಂದ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ.
ವಾಸು ಪುಟ್ಟಮಾಸ್ತಿಗೌಡ, ರೈತ ಮುಖಂಡ, ಕೃಷ್ಣಾಪುರದೊಡ್ಡಿ
ವನ್ಯ ಪ್ರಾಣಿ ದಾಳಿಗೆ ಒಳಗಾದವರಿಗೆ ಇಲಾಖೆ ನಿಗದಿಪಡಿಸಿದ ಮಾನದಂಡದಲ್ಲಿಯೇ ಸೂಕ್ತ ಪರಿಹಾರ ನೀಡಲಾಗುತ್ತಿದೆ. ಪರಿಹಾರ ಹೆಚ್ಚಳ ಮಾಡುವಂತೆ ಸಾರ್ವಜನಿಕರು ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರು. ಜಿಲ್ಲೆಯಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ದೇವರಾಜು, ಡಿಎಫ್ಒ,