ರಾಮನಗರ: ಭೀಕರ ಮಳೆಗೆ ಹಲವು ಅವಾಂತರಗಳು ನಡೆಯುತ್ತಿದ್ದು, ಇದೀಗ ರಾಮನಗರ ತಾಲೂಕಿನ ಸುಗ್ಗನಹಳ್ಳಿ ಸೇತುವೆ ಅರ್ಕಾವತಿ ನದಿ ಪ್ರವಾಹದ ರಬ್ಬಸಕ್ಕೆ ಕೊಚ್ಚಿ ಹೋಗಿವೆ.
ಮಂಗಳವಾರ ಮಧ್ಯಾಹ್ನ ಮ3.30ರ ಸುಮಾರಿಗೆ ಸೇತುವೆ ಕೊಚ್ಚಿ ಹೋಗಿದ್ದು, ಈ ವೇಳೆ ಕೊಚ್ಚಿ ಹೋಗುತ್ತಿದ್ದ ತಿಮ್ಮ ಸಂದ್ರ ಗ್ರಾಮದ ಕಂಡಾದಯ್ಯ ಎನ್ನುವ ಬೈಕ್ ಸವರಾನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಏನಾಯ್ತು?: ರಾಮನಗರದಿಂದ ಸುಗ್ಗನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಅಡ್ಡಲಾಗಿ 1985ರಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಅರ್ಕಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣದಿಂದಾಗಿ ರಭಸ ತಡೆಯಲು ಸಾಧ್ಯವಾಗದೆ ಸೇತುವೆ ಮಧ್ಯಭಾಗ ಕುಸಿದು ಬಿದ್ದು ಕೊಚ್ಚಿ ಹೋಗಿವೆ. 1985ರಲ್ಲಿ ಅಂದಿನ ಸ್ಥಳೀಯ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಬೋರಯ್ಯ ಅವರು ಒತ್ತಾಸೆಯೊಂದಿಗೆ ಇ ನಿರ್ಮಾಣವಾಗಿದ್ದ, ಈ ಸೇತುವೆ ಸುಮಾರು 150 ಮೀಟರ್ ಉದ್ದವಿದ್ದು, ಪೈಪ್ಗಳನ್ನು ಅಳವಡಿಕೆ ಮಾಡಿ ನಿರ್ಮಾಣ ಮಾಡಲಾಗಿತ್ತು.
ವ್ಯಕ್ತಿ ರಕ್ಷಣೆ: ಸೇತುವೆ ಕೊಚ್ಚಿ ಹೋಗುತ್ತಿದ್ದಂತೆ ಇದರ ಅರಿವಿಲ್ಲದೆ, ತಮ್ಮ ಮೊಪೆಡ್ನಲ್ಲಿ ಹೋಗುತ್ತಿದ್ದ ತಿಮ್ಮ ಸಂದ್ರ ಗ್ರಾಮದ ಕಂಡಾದಯ್ಯ ಎಂಬಾತ ಕುಸಿಯುತ್ತಿರುವ ಸೇತುವೆಯಲ್ಲಿ ಸಿಲುಕಿದ್ದಾರೆ. ತಕ್ಷಣೆವೇ ನೆರವಿಗೆ ಬಂದ ಸ್ಥಳೀಯರು, ಹಗ್ಗವನ್ನು ನೀಡಿ ನೀರಿನಲ್ಲಿ ಕೊಚ್ಚಿ ಹೋಗಬೇಕಿದ್ದ ಅವರನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ.
ಸಂಪರ್ಕ ಕಡಿತ: ರಾಮನಗರ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸುಗ್ಗನಹಳ್ಳಿ ಗ್ರಾಮದ ವ್ಯಾಣಿಜ್ಯ ಕೇಂದ್ರವಾಗಿತ್ತು. ಶಾಲೆ, ಕಾಲೇಜು, ಬ್ಯಾಂಕ್, ಆಸ್ಪತ್ರೆ ಸೇರಿದಂತೆ ಹಲವಾರು ಸೇವೆಗಳು ಸುಗ್ಗನಹಳ್ಳಿಯಲ್ಲಿಯೇ ಇದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಈ ಸೇತುವೆ ಮೂಲಕವೇ ಸುಗ್ಗನಹಳ್ಳಿಗೆ ತೆರಳುತ್ತಿದ್ದರು. ಇದೀಗ ಸೇತುವೆ ಕುಸಿತದಿಂದಾಗಿ ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದ್ದು, ಬೆಂಗಳೂರು - ಮೈಸೂರು ಹೆದ್ದಾರಿ ಮಾಯಗಾನಹಳ್ಳಿ ಬಳಿಯಿಂದಲೇ ಸುತ್ತಿಕೊಂಡು ಇಲ್ಲಿಗೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಗಣಿಗಾರಿಕೆ ಎಫೆಕ್ಟ್: ಸುಗ್ಗನಹಳ್ಳಿ ಸೇತುವೆ ಕುಸಿದ ಹೋಗಲು ಒಂದೆಡೆ ಮಳೆ ನೀರು ಹೆಚ್ಚಾಗಿದ್ದರೂ ಈ ಭಾಗದಲ್ಲಿ ಅದರಲ್ಲೂ ಸುಗ್ಗನಹಳ್ಳಿ ಸೇತುವೆ ಬಳಿಯೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯೇ ಕಾರಣವಾಗಿದೆ. ಅರ್ಕಾವತಿ ನದಿ ಪಾತ್ರದಲ್ಲಿ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿದ್ದು ಮತ್ತಷ್ಟು ಸೇತುವೆಗಳು ಕೊಚ್ಚಿ ಹೋಗಲಿಯೋ ಎನ್ನುವ ಆತಂಕವೂ ನಿರ್ಮಾಣವಾಗಿದೆ.
ನದಿಯಲ್ಲಿ ಹೆಚ್ಚಿನ ನೀರು: ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಕಾರಣದಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದೆ. ಈ ನೀರನ್ನು ಮಂಚನ ಬೆಲೆ ಜಲಾಶಯಕ್ಕೆ ನೀರು ಬಿಡಲಾಗುತ್ತಿದ್ದು. ಇದರಿಂದಾಗಿ ಅರ್ಕಾವತಿ ನದಿಗೆ ಹೆಚ್ಚಿನ ನೀರು ಹರಿಯ ಬಿಡಲಾಗುತ್ತಿದೆ. ಮುಂದಿನ ಹಲವಾರು ದಿನಗಳ ಕಾಲ ಇದೇ ಪ್ರವಾಹ ಪರಿಸ್ಥಿತಿ ಮುಂದುವರಿಯಲಿದೆ.