ನ್ಯೂಸ್

ಡಿಕೆಶಿ ಎದುರು ಅಶೋಕ್ ಹರಕೆ ಕುರಿ ವರಿಷ್ಠರ ಎಡವಟ್ಟಿಗೆ ಬೆಲೆ ತೆತ್ತ ಬಿಜೆಪಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಿಜೆಪಿ ಹೈ ಕಮಾಂಡ್ ಮಾಡಿದ ಎಡವಟ್ಟಿಗೆ ಹಳೇ ಮೈಸೂರು ಭಾಗದಲ್ಲಿ ಭಾರೀ ಬೆಲೆ ತೆತ್ತಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿರುವ ಆರ್. ಅಶೋಕ್ ಅವರನ್ನು ಪೂರ್ವ ತಯಾರಿ ಇಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಕಣಕ್ಕೆ ಇಳಿಸುವ ಮೂಲಕ ದೊಡ್ಡ ಪ್ರಮಾದ ಮಾಡಿ, ಇಡೀ ಪಕ್ಷ ಈ ಭಾಗದಲ್ಲಿ ನಗೆಪಾಟಲಿಗೆೆ ಈಡಾಗುವಂತೆ ಮಾಡಿದೆ.

ಶಸ್ತ್ರಾಭ್ಯಾಸವಿಲ್ಲದೆ ಕಣಕ್ಕೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಟಾರ್ಗೆಟ್ ಲಿಸ್ಟ್‌ನಲ್ಲಿ ಇದ್ದ ಮೊದಲ ಹೆಸರು. ಇವರ ವಿರುದ್ಧ ಹೋರಾಡಾ ಬೇಕಾದರೆ, ಇವರಿಗೆ ಸಮ ಬಲದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು. ಆರ್.ಅಶೋಕ್ ಅವರಲ್ಲಿ ಪೈಪೋಟಿ ನೀಡುವ ಶಕ್ತಿ ಇತ್ತಾದರೂ ಸಂಘಟನಾ ಬಲವೇ ಇಲ್ಲದ ಬಿಜೆಪಿ ಕನಕಪುರದಲ್ಲಿ ಶಸ್ತ್ರವೇ ಇಲ್ಲದೆ ಕಣಕ್ಕೆ ಇಳಿಸಿತು. ಕಳೆದ ಹಲವಾರು ಚುನಾವಣೆಗಳ ಇತಿಹಾಸವನ್ನು ಕೆದಕಿದಾಗ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 6 ಸಾವಿರಕ್ಕಿಂತ ಹೆಚ್ಚಿನ ಮತಗಳನ್ನು ಪಡೆದ ಉದಾಹರಣೆಗಳು ಇಲ್ಲ. ಇಂತಹ ಕ್ಷೇತ್ರದಲ್ಲಿ ಅಶೋಕ್ ಅವರನ್ನು ಹರಕೆ ಕುರಿಯಂತೆ ಕಣಕ್ಕೆ ಇಳಿಸಿತು. ಇಂತಹ ತಪ್ಪು ನಿರ್ಧಾರದಿಂದಾಗಿ ಪ್ರಬಲವಾಗಿರುವ ಡಿ.ಕೆ. ಶಿವಕುಮಾರ್ ಎದುರು ಠೇವಣಿ ಕಳೆದುಕೊಳ್ಳುವ ಮೂಲಕ ಅಶೋಕ್ ಮಾತ್ರ ಅಲ್ಲ, ಬಿಜೆಪಿ ಪಕ್ಷ ಸಹ ಮಂಡಿಯೂರುವಂತೆ ಮಾಡಿತು.

ಇತರ ಕ್ಷೇತ್ರಗಳಿಗೂ ಹೊಡೆತ

ಹಳೇ ಮೈಸೂರು ಭಾಗದಲ್ಲಿ ಆರ್. ಅಶೋಕ್ ಬಿಜೆಪಿಯ ಒಕ್ಕಲಿಗ ನಾಯಕರಾಗಿ ಗುರ್ತಿಸಿಕೊಂಡಿದ್ದರು. ತಮ್ಮ ಕ್ಷೇತ್ರ ಮಾತ್ರವಲ್ಲದೆ ಮಂಡ್ಯ, ಮೈಸೂರಿನಲ್ಲಿಯೂ ತಮ್ಮ ಶಕ್ತಿಯ ಮೂಲಕ ಪಕ್ಷದ ಸಂಘಟನೆಯನ್ನು ಮಾಡಿದ್ದರು. ಇವರನ್ನು ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸುವ ಮೂಲಕ, ಇಲ್ಲಿಗಷ್ಟೇ ಸೀಮಿತವಾಗುವಂತೆ ಮಾಡಲಾಯಿತು. ಇದರ ಪರಿಣಾಮ, ಮಂಡ್ಯ, ಮೈಸೂರು, ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪಕ್ಷದ ಪರವಾಗಿ ದುಡಿಯುವ ಅವಕಾಶದಿಂದಲೂ ವಂಚಿತರಾಗಿಸಿತು.

ಕನಿಷ್ಠ ಸಿದ್ಧತೆ ಬೇಕಿತ್ತು

ಕನಕಪುರಕ್ಕೆ ಸ್ಥಳೀಯರ ಹೊರತಾಗಿ ಯಾರನ್ನೆ ಕಣಕ್ಕೆ ಇಳಿಸಿದ್ದರೂ ಕನಿಷ್ಠ ಸಿದ್ಧತೆಯನ್ನು ಪಕ್ಷ ಮಾಡಿಕೊಳ್ಳಬೇಕಿತ್ತು. ಸುಮಾರು ಒಂದು ವರ್ಷ ಮೊದಲೇ ಅಶೋಕ್ ಅಭ್ಯರ್ಥಿ ಎಂದು ಘೋಷಣೆ ಮಾಡಿ, ಪಕ್ಷ ಸಂಘಟನೆ ಮಾಡಲು ಪಕ್ಷ ಮುಂದಾಗಿದ್ದರೆ ಖಂಡಿತವಾಗಿ ಪ್ರಬಲ ಪೈಪೋಟಿಯನ್ನು ನೀಡುತ್ತಿತ್ತು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧವಾದ ಮತಗಳು ಇದ್ದು ಇವುಗಳನ್ನು ಸೆಳೆಯಲೂ ಸಾಧ್ಯವಾಗುತ್ತಿತ್ತು. ಪಕ್ಷದ ಈ ನಡೆ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್‌ರಂತಹ ಪ್ರಬಲ ನಾಯಕರ ವಿರುದ್ಧ ಕಳೆದ ಹಲವಾರು ವರ್ಷಗಳಿಂದಲೂ ಸೆಣಸುತ್ತಿರುವ ಸ್ಥಳೀಯ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಸಹ ಕುಗ್ಗಿಸಿತು.

ನಡೆಯದ ಮ್ಯಾಜಿಕ್

ಜಿಲ್ಲೆಗೆ ಈ ಬಾರಿ ಪ್ರಧಾನಿ ಸೇರಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಬಿಜೆಪಿಯ ಹಲವಾರು ಖ್ಯಾತನಾಮರು ಪ್ರಚಾರಕ್ಕೆ ಬಂದು ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಚನ್ನಪಟ್ಟಣಕ್ಕೆ ಮೋದಿ ಬಂದರೂ ಯೋಗೇಶ್ವರ್ ಗೆಲುವಿನ ದಡ ಮುಟ್ಟಲಿಲ್ಲ. ಕನಕಪುರದಲ್ಲಿ ಸ್ವತಃ ಮುಖ್ಯಮಂತ್ರಿ ಪ್ರಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಮನಗರ ಮತ್ತು ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ಮ್ಯಾಜಿಕ್ ಮಾಡಲೇ ಇಲ್ಲ.