ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಗಬ್ಬು ನಾರುತ್ತಿರುವ ನಾಡಪ್ರಭು ಕೆಂಪೇಗೌಡರ ಪಟ್ಟಣಕ್ಕೆ ಮುಕ್ತಿ ಎಂದು? ಅಧಿಕಾರಿಗಳ ಜಾಣ ಕುರೊಡೋ ಅಥವಾ ರಾಜಕಾರಣಿಗಳ ನಿರ್ಲಕ್ಷವೋ... ಇದು ಪಟ್ಟಣದ ಜನರ ಪ್ರಶ್ನೆಯಾಗಿದೆ.
ಪಟ್ಟಣದಲ್ಲಿ 12 ವರ್ಷಗಳ ಹಿಂದೆ ಪ್ರಾರಂಭವಾದ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಮ್ಯಾನ್‌ಹೋಲ್‌ಗಳು ಉಕ್ಕಿ ರಸ್ತೆಯಲ್ಲಿ ಕಲುಷಿತ ನೀರು ಹರಿದು ಕೆರೆಯಂತಾಗಿದೆ.
ನಗರ, ಪಟ್ಟಣಗಳ ಸ್ವಚ್ಛತೆ, ಸೌಂದಯ್ಯ ಕಾಪಾಡಲು ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿದೆ. ಆದರೆ ಮಾಗಡಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 12 ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು ಅಂದಿನಿಂದಲೂ ಕಾಮಗಾರಿ ನಡೆಯುತ್ತಲೇ ಇದೆ. ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ಪೈಪ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ಉಕ್ಕಿ ಹರಿಯುತ್ತಿವೆ.
ಕೆಲವೆಡೆ ರಸೆ ್ತಮಧ್ಯದಲ್ಲೇ ಹರಿಯುವುದರಿಂದ ದುರ್ವಾಸನೆ ಬೀರುತ್ತಿದೆ. ಪಟ್ಟಣದ ಐಡಿಎಸ್‌ಎಂಟಿ ಬಡಾವಣೆ, ತಿರುಮಲೆ ಬ್ಯಾಂಕ್ ಮುಂಭಾಗದ ರಸ್ತೆ, ಮಾಜಿ ಸಚಿವ ಎಚ್.ಎಂ.ರೇವಣ್ಣ ತೋಟದ ಮುಂಭಾಗ ಮ್ಯಾನ್‌ಹೋಲ್‌ಗಳು ತುಂಬಿ ಕಲುಷಿತ ನೀರು ರಸ್ತೆ ಸೇರುತ್ತಿದೆ. ಇದರಿಂದಾಗಿ ಜನತೆ ರೋಗದ ಭೀತಿ ಎದುರಿಸುವಂತಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಸ್ವಚ್ಛತೆಗೆ ಇರುವ ಒಂದು ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರ ಪದೇಪದೇ ಕೆಟ್ಟುಹೋಗುತ್ತಿದೆ. ಜನತೆ ಜೆಟ್ಟಿಂಗ್ ಯಂತ್ರದ ಸೇವೆಗೆ ಕರೆ ಮಾಡಿದರೆ 15 ದಿನ ಕಳೆದರೂ ಕಳಿಸದೆ ಪುರಸಭೆಯವರು ಮೊಂಡುತನ ತೋರುತ್ತಿದೆ. ಇದರಿಂದ ದುಬಾರಿ ಹಣ ತೆತ್ತು ಅನಿವಾರ್ಯವಾಗಿ ಖಾಸಗಿ ಯಂತ್ರಗಳ ಮೊರೆ ಹೋಗುವಂತಾಗಿದೆ ಎಂದು ನಾಗರಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮತ್ತು ಹಾಲಿ ಶಾಸಕರು ಎಷ್ಟೇ ಪ್ರಯತ್ನಿಸಿದರೂ ಪಟ್ಟಣದ ಒಳಚರಂಡಿ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕಾಮಗಾರಿ ಬಗ್ಗೆ ನೀಲಿನಕ್ಷೆ ತಯಾರಿಸದೆ ಇರುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
12 ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ಒಳಚರಂಡಿಗೆ ಸಣ್ಣ ಅಳತೆಯ ಪೈಪ್ ಅಳವಡಿಸಲಾಗಿದೆ. ಒಳಚರಂಡಿ ಕಾಮಗಾರಿ ವಹಿಸಿಕೊಂಡವರು ಸಮಸ್ಯೆ ಬಗೆಹರಿಸಬೇಕು. ಆದರೆ, ಅವರು ನಾಪತ್ತೆಯಾಗಿರುವುದರಿಂದ ಪುರಸಭೆಯಿಂದಲೇ ಸಮಸ್ಯೆ ಬಗೆಹರಿಸಲಾಗುತ್ತಿದೆ. ಒಳಚರಂಡಿ ಸಂಪರ್ಕ ಪಡೆದವರೂ ಇದುವರೆಗೆ ಪುರಸಭೆಗೆ ಹಣ ಕಟ್ಟಿಲ್ಲ. ಐಡಿಎಸ್‌ಎಂಟಿ ಬಡಾವಣೆಯಲ್ಲಿ ನಿವೇಶನದ ಮಾಲೀಕರು ಜಾಗ ಬಿಡದ ಕಾರಣ ಸಮಸ್ಯೆಯಾಗಿದೆ.
ರಘು, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ
ಒಂದು ವರ್ಷದಿಂದ ಮ್ಯಾನ್‌ಹೋಲ್ ತುಂಬಿ ಹರಿಯುತ್ತಿದೆ. ಪುರಸಭೆಗೆ ಮನವಿ ಮಾಡಿ ಬೇಸರವಾಗಿದೆ. ದುರ್ವಾಸನೆಯಿಂದಾಗಿ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಕಷ್ಟ ಕೇಳುವವರು ಯಾರು ಇಲ್ಲ.
ಶ್ರೀನಿವಾಸ್, ಮಾಗಡಿ
ಒಳಚರಂಡಿ ಸಂಪರ್ಕ ಪಡೆದಿರುವ ಮನೆಯವರು ಸಮರ್ಪಕವಾಗಿ ಸಂಪರ್ಕ ಪಡೆದಿಲ್ಲ, ತ್ಯಾಜ್ಯ ಮತ್ತು ಇತರ ವಸ್ತುಗಳನ್ನು ಒಳಚರಂಡಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ.
ಕುಸುಮ, ಪುರಸಭೆ ಆರೋಗ್ಯಾಧಿಕಾರಿ