ನ್ಯೂಸ್

ಚನ್ನಪಟ್ಟಣಕ್ಕೆ ಕೈ ಅಭ್ಯರ್ಥಿ ಯಾರು? ಹುರಿಯಾಳು ಖಾತ್ರಿಯಾಗದೆ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಯ ಕ್ಷೇತ್ರವಾದ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದಿರುವುದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷರ ತವರಲ್ಲೇ ಪಕ್ಷದ ಹುರಿಯಾಳು ಸಿದ್ಧವಿಲ್ಲದಿರುವುದು ಡಿಕೆ ಸಹೋದರರಿಗೆ ನುಂಗಲಾರದ ತುತ್ತಾಗಿದೆ.

ಹೌದು..., ಘಟಾನುಘಟಿ ನಾಯಕರ ಸ್ಪರ್ಧೆಯಿಂದಾಗಿ ಚನ್ನಪಟ್ಟಣ ಇಡೀ ಜಿಲ್ಲೆಯಲ್ಲಿ ಪ್ರತಿಷ್ಠಿತ ಕದನ ಎಂದೆನಿಸಿಕೊಂಡಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಚುನಾವಣಾ ತಂತ್ರ, ಪ್ರತಿತಂತ್ರಗಳಲ್ಲಿ ಮಗ್ನವಾಗಿವೆ. ಬಿಜೆಪಿ ಸಂಭವನೀಯ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸ್ವಾಭಿಮಾನದ ಸಂಕಲ್ಪ ನಡಿಗೆ ಹೆಸರಿನಲ್ಲಿ ತಾಲೂಕನ್ನು ಸುತ್ತು ಹಾಕುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಸ್ಥಳೀಯ ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಹಲವು ದಿನ ಕಳೆದರೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಖಾತರಿಯಾಗದೇ ಕಾಂಗ್ರೆಸ್‌ನಲ್ಲಿ ಮಂಕು ಬಡಿದಂತೆ ಗೋಚರವಾಗುತ್ತಿದೆ.

ಅತ್ತ ಪ್ರಸನ್ನ, ಇತ್ತ ಶರತಚಂದ್ರ ಕೂಡ ಇಲ್ಲ!!

ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಎನಿಸಿಕೊಂಡಿದ್ದ ಪ್ರಸನ್ನ ಪಿ. ಗೌಡ ಕೆಲದಿನಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಕೊಂಡರು. ಇದಕ್ಕೂ ಮೊದಲೇ ತನಗೆ ಟಿಕೆಟ್ ದಕ್ಕದು ಎಂಬ ಕಾರಣದಿಂದ ಡಿಕೆಶಿ ಬಾವ ಶರತಚಂದ್ರ ಕೂಡ ಪಕ್ಷ ತೊರೆದು ಈಗಾಗಲೇ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಆರಂಭದಲ್ಲಿ ಶರತಚಂದ್ರ ಟಿಕೆಟ್ ಅಕಾಂಕ್ಷಿಯಾಗಿದ್ದರು. ಆದರೆ, ಕುಟುಂಬ ರಾಜಕಾರಣದ ಹಣೆಪಟ್ಟಿ ಅಂಟಿಕೊಳ್ಳುತ್ತದೆ ಎಂಬ ಕಾರಣಕ್ಕೆ ಶರತ್‌ಚಂದ್ರಗೆ ಒಲವು ತೋರಿಸದ ಬಾಮೈದರು, ಉದ್ಯಮಿ ಪ್ರಸನ್ನ ಪಿ.ಗೌಡ ಎಂಬುವವರನ್ನು ಕರೆತಂದು ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ, ಮೊದಲ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಅಸಮಾಧಾನಗೊಂಡ ಪ್ರಸನ್ನ ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಜಿಸಿ ಮಾಜಿ ಸಿಎಂ ಎಚ್‌ಡಿಕೆ ಗೂಡು ಸೇರಿಕೊಂಡರು. ಈ ಎಲ್ಲ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿದೆ.

ಜಿಲ್ಲಾಧ್ಯಕ್ಷರಿಗೆ ಪಟ್ಟ ಕಟ್ಟುವ ಸಿದ್ಧತೆ?

ಈ ಹಿಂದೆ ಶರತಚಂದ್ರ, ಪ್ರಸನ್ನ ಪಿ.ಗೌಡ ಸೇರಿ ಎಂಟು ಅಕಾಂಕ್ಷಿತರು ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ, ಈ ಇಬ್ಬರನ್ನು ಹೊರತುಪಡಿಸಿ, ಉಳಿದವರು ಸಹ ಪಕ್ಷದ ಟಿಕೆಟ್ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ. ಅಂತಿಮವಾಗಿ ಡಿಸಿಸಿಯಿಂದ ಕೆಪಿಸಿಸಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಮಾಜಿ ಶಾಸಕ ಡಿ.ಟಿ.ರಾಮು ಪುತ್ರ ಭಗತ್‌ರಾಮ್, ಜಿಪಂ ಮಾಜಿ ಉಪಾಧ್ಯಕ್ಷೆ ವೀಣಾ ಚಂದ್ರು ಪುತ್ರ ಚಂದ್ರಸಾಗರ್ ಹೆಸರು ರವಾನಿಸಲಾಗಿದೆ. ಈ ಮೂವರಲ್ಲಿ ಯಾರು ಹಿತವರು ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಆರಂಭವಾಗಿದೆ ಎನ್ನಲಾಗಿದೆ. ಅಂತಿಮವಾಗಿ ಬೊಂಬೆನಾಡ ಅಖಾಡಕ್ಕೆ ಪಕ್ಷದ ಜಿಲ್ಲಾಧ್ಯಕ್ಷರನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಯಾರೀ ಗಂಗಾಧರ್?

ಕಾಂಗ್ರೆಸ್ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್ ಈ ಹಿಂದೆ ಅಕ್ಕೂರು ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಜತೆಗೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಉದ್ಯಮಿಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಕ್ಷೇತ್ರಕ್ಕೆ ಚಿರಪರಿಚಿತ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿರುವ ಇವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಟಾಂಗ್ ನೀಡಬಹುದು ಎಂಬುದು ಡಿ.ಕೆ. ಸಹೋದರರ ಯೋಜನೆಯಾಗಿದೆ. ಪಕ್ಷದ ಮೂರನೇ ಪಟ್ಟಿಯಲ್ಲಿ ಇವರ ಹೆಸರು ಘೋಷಣೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆೆ.