ನ್ಯೂಸ್

ಯುವ ಸಮುದಾಯ ರಕ್ತದಾನ ಮಾಡಬೇಕು ಕೋಕಾಕೋಲ ಕಂಪನಿ ಅಧಿಕಾರಿ ವಿನೋದ್ ಜಕಾತಿ ಕರೆ

ಬಿಡದಿ

ರಕ್ತದ ಅವಶ್ಯಕತೆ ಇರುವ ಇನ್ನೊಬ್ಬರ ಪ್ರಾಣ ಉಳಿಸಲು ಯುವ ಸಮೂಹ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕೋಕಾಕೋಲ ಕಂಪನಿಯ ಅಧಿಕಾರಿ ವಿನೋದ್ ಜಕಾತಿ ಕರೆ ನೀಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಡದಿ ಗೆಳೆಯರ ಬಳಗ, ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಸಂಘದ ಸದಸ್ಯ ದಿ.ಶಶಿಕುಮಾರ್ ಅವರ 19ನೆ ವರ್ಷದ ಸ್ಮರಣಾರ್ಥದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಗೆಳೆಯರ ಬಳಗದವರು ಪ್ರತಿವರ್ಷ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸ್ಪಂದನ ಟ್ರಸ್ಟ್ ಅಧ್ಯಕ್ಷ ಮುತ್ತಣ್ಣ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ರೋಗಗಳೂ ಹೆಚ್ಚಾಗುತ್ತಿವೆ. ರಕ್ತ ಕೊರತೆಯಿಂದ, ಅಪಘಾತ ಸಂಭವಿಸಿದಾಗ ರಕ್ತ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಇಂತಹವರ ಜೀವ ರಕ್ಷಣೆಗೆ ರಕ್ತ ಅಗತ್ಯವಾಗಿದೆ. ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಶಿಬಿರದಲ್ಲಿ ಒಟ್ಟು 252 ಯುನಿಟ್ ರಕ್ತ ಸಂಗ್ರಹವಾಯಿತು. ರಕ್ತದಾನಿಗಳಿಗೆ ತೆಂಗಿನ ಸಸಿ, ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಗೆಳೆಯರ ಬಳಗದ ಖಜಾಂಚಿ ಶೇಖರ್, ಡಾ.ಶಶಿಕಿರಣ್ ಮುಂತಾದವರು ಹಾಜರಿದ್ದರು.