ನ್ಯೂಸ್

ಮುಂದಿನದು ಮಹಾನಗರ ಪಾಲಿಕೆ ಚುನಾವಣೆ : ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡುವ ಗುರಿ ನಗರಸಭೆ ಚುನಾವಣೆ ಪ್ರಚಾರಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಚಾಲನೆ

Ramanagara

ರಾಮನಗರ :  ಮುಂದಿನ ಚುನಾವಣೆ ರಾಮನಗರ - ಚನ್ನಪಟ್ಟಣ ಅವಳಿ ನಗರಗಳ ಮಹಾನಗರ ಪಾಲಿಕೆಗೆ ನಡೆಯಲಿದೆ, ಇದನ್ನು ಕಾರ್ಯಗತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ನಗರಸಭೆ ಚುನಾವಣೆ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾಗಿ 15 ವರ್ಷ ಕಳೆದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇದಕ್ಕೆ ಇಲ್ಲಿನ ಶಾಸಕರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರು ಉತ್ತರ ನೀಡಬೇಕು ಎಂದರು.

ಆದರೆ, ಈಗ ನಡೆಯುವ ಚುನಾವಣೆ ಅಭಿವೃದ್ಧಿಯ ದಿಕ್ಸೂಚಿಯನ್ನು ಬದಲಾಯಿಸುವ ಚುನಾವಣೆಯಾಗಿದ್ದು, ರಾಮನಗರ ಮತ್ತು ಚನ್ನಪಟ್ಟಣ ಜನತೆ ಬಿಜೆಪಿಯನ್ನು ಬೆಂಬಲಿಸುವ ಮೂಲಕ ನವನಗರಗಳ ನಿರ್ಮಾಣಕ್ಕೆ ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರಾಮನಗರ ಜಿಲ್ಲೆಯಲ್ಲಿ ರಸ್ತೆ, ಕುಡಿಯುವ ನೀರು, ಮನೆಗಳ ಕೊರತೆ, ಮೂಲಸೌಕರ್ಯಗಳ ಕೊರತೆ ಹೀಗೆ ಸಾಕಷ್ಟು ಸಮಸ್ಯೆಗಳಿವೆ. ರಾಮನಗರ ಅಭಿವೃದ್ಧಿ ಪ್ರಾಧಿಕಾರವಾಗಿ ವರ್ಷಗಳೇ ಕಳೆದಿದ್ದರೂ ಮಾಸ್ಟರ್ ಪ್ಲಾನ್ ಇಲ್ಲ. ಆದರೆ ಇವೆಲ್ಲವನ್ನೂ ಸರಿಪಡಿಸುವ ಗುರಿ ನಮ್ಮದಾಗಿದೆ. ಮನೆಗಳ ನಿರ್ಮಾಣ ಮಾಡುವ ಜತೆಗೆ, ನಗರಸಭೆಯ ಇ-ಖಾತೆ ಸಮಸ್ಯೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. 2022ರ ವೇಳೆಗೆ ರಾಮನಗರಕ್ಕೆ ದಿನದ 24 ಗಂಟೆಯೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.

ಓಟ್ ಬ್ಯಾಂಕ್ ರಾಜಕಾರಣ: ಇಲ್ಲಿನ ಶಾಸಕರು, ಸಂಸದರು ಹಿಂದೆ ಇದ್ದ ಮಂತ್ರಿಗಳು ಹಾಗೂ ಇಲ್ಲಿಂದಲೇ ಮುಖ್ಯಮಂತ್ರಿ ಆದವರ ವೈಫಲ್ಯದ ಪರಿಣಾಮ ಜನತೆ ತೊಂದರೆಗೆ ಒಳಗಾಗಿದ್ದಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸಿದ್ದೇವೆ. ಇದರ ಜತೆಗೆ ರಾಮನಗರ ಮತ್ತು ಚನ್ನಪಟ್ಟಣ ಎರಡೂ ನಗರಸಭೆಗಳಲ್ಲಿ ನಾವು ಎಲ್ಲಿ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆಯೋ ಅಲ್ಲೇ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಇದು ಚುನಾವಣೆ ತಂತ್ರಗಾರಿಕೆಯಲ್ಲ. ಹಿಂದಿನಿಂದಲೂ ಕೆಲವರು ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಸಮುದಾಯವನ್ನು ವಿಭಜನೆ ಮಾಡುತ್ತಾ ಬಂದರು. ಆದರೆ, ನಾವು ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದು, ಎಲ್ಲರೂ ಭಾರತೀಯರು ಎಂದು ಹೇಳಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಎಚ್ಚರಿಕೆ ಇರಲಿ: ಕರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಸಾಮಾಜಿಕ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ವರ್ತಿಸಿದರೆ ಖಂಡಿತವಾಗಿ ಕರೊನಾವನ್ನು ಗೆಲ್ಲಬಹುದಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್, ಔಷಧ, ಬೆಡ್ ಹೀಗೆ ಯಾವುದಕ್ಕೂ ಕೊರತೆ ಇಲ್ಲ. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಂಡರೆ ರೋಗದಿಂದ ಗುಣಮುಖರಾಗಬಹುದು. ಜಿಲ್ಲೆಯಲ್ಲಿಯೂ ಕೇವಲ 24 ಗಂಟೆಗಳಲ್ಲಿ ಪರೀಕ್ಷಾ ವರದಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಮುಂತಾದವರು ಇದ್ದರು.

ರಾಮನಗರಕ್ಕೆ ಸಬ್ ಅರ್ಬನ್ ರೈಲು :  ಬೆಂಗಳೂರಿನ 57 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಸಬ್ ಅರ್ಬನ್ ರೈಲು ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು. ರಾಮನಗರದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಹ ಹೋಗಬಹುದಾಗಿದ್ದು, ಬೆಂಗಳೂರಿನ ನಾಲ್ಕು ಮೂಲೆಗಳಿಗೂ ಈ ವ್ಯವಸ್ಥೆಯಿಂದ ತಲುಪಬಹುದಾಗಿದೆ. ಇದರ ಜತಗೆ ರಾಮನಗರಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸುವುದು, ಸ್ಮಾರ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳ ಸ್ಥಾಪನೆ ಸೇರಿದಂತೆ, ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ. ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.