ನ್ಯೂಸ್

ರಾಮನಗರ-ಚನ್ನಪಟ್ಟಣ ಅವಳಿ ನಗರ : ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಮುಂದಾದ ರಾಜ್ಯ ಸರ್ಕಾರ

Ramanagara

ರಾಮನಗರ : ರಾಜಧಾನಿ ಬೆಂಗಳೂರು ಹಾಗೂ ಆರಮನೆ ನಗರಿ ಮೈಸೂರು ಮಾರ್ಗದ ಆಯಕಟ್ಟಿನ ಜಾಗದಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣಗಳನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಧುನಿಕ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಈ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಬೆಂಗಳೂರು ಅಭಿವೃದ್ಧಿ ಮಾದರಿ ಇಟ್ಟುಕೊಂಡು ಇವೆರಡೂ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಅತ್ಯುತ್ತಮ ಮೂಲಸೌಕರ್ಯ, ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಆಕರ್ಷಕ ವಿಶಾಲ ಉದ್ಯಾನಗಳ ನಿರ್ಮಾಣ, ಎಲ್ಲ ರಸ್ತೆಗಳು ಇತಿಹಾಸ ದಾಖಲಿಸುವುದು, ಕ್ರೀಡಾಂಗಣಗಳ ನಿರ್ಮಾಣ ಸೇರಿ ಅಗತ್ಯ ಕೆಲಸಗಳನ್ನು ಕಾಲಮಿತಿಯೊಳಗೆ ಮುಗಿಸುವ ಬಗ್ಗೆ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ, ಈಗಾಗಲೇ ಸಮಗ್ರ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಲು 37 ಲಕ್ಷ ರೂ. ಕೊಡಲಾಗಿದೆ. ಆರೇಳು ತಿಂಗಳಲ್ಲಿ ಈ ಕೆಲಸ ಆಗಲಿದೆ. ಈ ಮೂಲಕ ಸುಸಜ್ಜಿತ ನಗರಗಳ ನಿರ್ಮಾಣಕ್ಕೆ ನಾಂದಿ ಹಾಡಲಿದ್ದೇವೆ ಎಂದರು.

ನಗರ ಸೌಂದರ್ಯ ರಕ್ಷಣೆಗೆ ಒತ್ತು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯಂತೆ ಅವಳಿ ನಗರಗಳ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಲಾಗುವುದು. ಕಸ ವಿಂಗಡಣೆ ಮತ್ತು ವಿಲೇವಾರಿಗೆ ಒತ್ತು ನೀಡುವುದರ ಜತೆಗೆ, ನಗರಗಳ ಸೌಂದರ್ಯ ಸಂರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಶಾಲವಾದ ಉದ್ಯಾನವನಗಳನ್ನು ನಿರ್ಮಾಣ ಮಾಡುವುದರ ಜತೆಗೆ, ಅವುಗಳ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ಮುಖ್ಯವಾಗಿ, ಎರಡೂ ಕಡೆ ಬೆಂಗಳೂರು ಮಾದರಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ನದಿ ಮೂಲಗಳಿಂದ ರಾಮನಗರ-ಚನ್ನಪಟ್ಟಣ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ಗ್ರಾಮಗಳ ಮನೆಗಳಿಗೂ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಎಸ್.ಎನ್. ದಿನೇಶ್ ಇದ್ದರು.

ಚನ್ನಪಟ್ಟಣ-ರಾಮನಗರ ನಗರಸಭೆಗಳ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು, ತಾಂತ್ರಿಕ ಅಧಿಕಾರಿಗಳು ಹಾಗೂ ನಗರಸಭೆಗಳ ಅಧಿಕಾರಿಗಳು ಇದ್ದರು.

ಪ್ರಾಧಿಕಾರಗಳಿಗೆ ಇನ್ನಷ್ಟು ಶಕ್ತಿ : ರಾಮನಗರ ಮತ್ತು ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರಗಳಿಗೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಎರಡೂ ಪಟ್ಟಣಗಳ ಆಮೂಲಾಗ್ರ ಅಭಿವೃದ್ಧಿಗೆ ಏನೆಲ್ಲ ಅಗತ್ಯವೋ ಎಲ್ಲವನ್ನೂ ಸರ್ಕಾರ ಒದಗಿಸುತ್ತಿದೆ ಎಂದ ಅವರು, ಚನ್ನಪಟ್ಟಣದಲ್ಲಿ ಇನ್ನೊಂದು ಬಸ್ ನಿಲ್ದಾಣದ ಅಗತ್ಯವಿದೆ ಎಂಬ ಬೇಡಿಕೆ ಬಂದಿದೆ. ಅದನ್ನೂ ತ್ವರಿತವಾಗಿ ಕಾರ್ಯಗತ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.