ಕನಕಪುರ : ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಸುಗ್ಗಿ ಸಂಭ್ರಮ-2021 ಕಾರ್ಯಕ್ರಮದಲ್ಲಿ ಜಾನಪದ ತೇರು, ಮೀನುಗಾರರು ಮತ್ತು ಸೋಬಾನೆ ಪದ ಕಲಾತಂಡಗಳ ಪ್ರದರ್ಶನ ಸಭಿಕರನ್ನು ರಂಜಿಸಿತು.
ನಗರದ ರೋಟರಿ ಭವನದಲ್ಲಿ ಶುಕ್ರವಾರ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಾನಪದ ತಜ್ಞ ಡಾ.ಅಪ್ಪಗೆರೆ ತಿಮ್ಮರಾಜು, ರಾಮನಗರ ಜಿಲ್ಲೆ ಕಲೆ, ಸಂಸ್ಕೃತಿ, ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರಗಳ ಸಂಗಮವಾಗಿದೆ. ಈ ನೆಲದ ಜಾನಪದ ಕಲೆ ಸೊಗಡು, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪೀಳಿಗೆಯ ಯುವ ಕಲಾವಿದರ ಮೇಲಿದೆ ಎಂದರು.
ಯುವ ಕಲಾವಿದರಲ್ಲಿ ಜಾಗೃತಿ ಮೂಡಿದರೆ ಜಾನಪದ ಕಲೆ, ಸಂಸ್ಕೃತಿ ಉಳಿಯುತ್ತದೆ. ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳಿಗೆ ಜಾನಪದ ಕಲೆ, ಸಾಹಿತ್ಯದ ಬಗ್ಗೆ ತಿಳಿಸುವ ಕೆಲಸವಾಗಬೇಕಿದೆ. ಈ ನೆಲದಲ್ಲಿ ಹುಟ್ಟಿರುವ ನಾವು ಶತಮಾನಗಳ ಹಿಂದಿನ ಕಲೆ, ಜಾನಪದ ಸಂಸ್ಕೃತಿಯನ್ನು ಅವಲೋಕಿಸಿ ಇವುಗಳನ್ನು ಉಳಿಸಿ, ಬೆಳೆಸಬೇಕೆಂದು ಕರೆ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜೋಗಿಲ ಸಿದ್ಧರಾಜು, ಅಂತಾರಾಷ್ಟ್ರೀಯ ಕಲಾವಿದ ಸಬ್ಬನಹಳ್ಳಿ ರಾಜು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಏರಂದ್ಯಾಪನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿ ಚಿಕ್ಕರಾಜು ಅವರು ಮಾತನಾಡಿ, ಹಳ್ಳಿಹಳ್ಳಿಗಳಿಗೂ ಜಾನಪದ ಸಾಹಿತ್ಯ ಮತ್ತು ಕಲೆಗಳ ಪ್ರಚಾರವನ್ನು ಮಾಡಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಹೆಚ್ಚು ಜಾನಪದ ಕಾರ್ಯಕ್ರಮಗಳು ಜರುಗಬೇಕು ಎಂದರು.
ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ ಕಲಾವಿದರು ಹಾಗು ತಮಟೆ ವಾದಕರು ವೈವಿಧ್ಯಮಯ ಸದ್ದಿನಲ್ಲಿ ಸಭಿಕರಿಗೆ ಕಲೆಯ ರಸದೌತಣ ಉಣಬಡಿಸಿದರು. ಸುಗ್ಗಿ ಸಂಭ್ರಮದ ಸಂಸ್ಥಾಪಕ ಕಾರ್ಯದರ್ಶಿ ಬಿಜ್ಜಹಳ್ಳಿ ಕಾಳಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಂಗನಿರ್ದೇಶಕ ಎಂ.ಪಿ.ನಾಗರಾಜು, ಬಿ.ಎಸ್.ಪಿ. ಮುಖಂಡ ಮಲ್ಲಿಕಾರ್ಜುನ್, ಗ್ರಾ.ಪಂ. ಉಪಾಧ್ಯಕ್ಷ ರಾಜುಗೌಡ, ಸದಸ್ಯ ಸನತ್‌ಕುಮಾರ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ತಾಲ್ಲೂಕು ಅಧ್ಯಕ್ಷ ನೇ.ರ.ಪ್ರಭಾಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.