ನ್ಯೂಸ್

ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ

ಎಚ್.ಡಿ.ಕೋಟೆ : ತಾಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಫೆ.25 ರಿಂದ 27 ವರೆಗೆ ಶ್ರೀ ಬಸವೇಶ್ವರಸ್ವಾಮಿಯ ಕೊಂಡೋತ್ಸವ ಮತ್ತು ಶ್ರೀ ರಾಮಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿವೆ.

ಫೆ.25 ರಂದು ಬೆಳಗ್ಗೆ 8.10 ರಿಂದ 9.20ರವರೆಗೆ ಶ್ರೀ ಬಸವೇಶ್ವರಸ್ವಾಮಿಯ ಕೊಂಡೋತ್ಸವ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಹೋಳಿ ಕಾರ್ಯಕ್ರಮವಿರುತ್ತದೆ. ರಾತ್ರಿ 10 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯುವಕರಿಂದ ಭೂಮಿ ತೂಕದ ಹೆಣ್ಣು ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಫೆ.26 ರಂದು ಶಿವರಾತ್ರಿ ಹಬ್ಬದ ಅಂಗವಾಗಿ ರಾತ್ರಿ ರಾಮಲಿಂಗೇಶ್ವರಸ್ವಾಮಿಗೆ ತೈಲಾಭಿಷೇಕ ಮತ್ತು ಪೂಜಾ ಕಾರ್ಯಕ್ರಮ ಹಾಗೂ ರಾತ್ರಿ 9 ರಿಂದ 11 ರವರೆಗೆ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ನಂತರ ಕಲಾತಪಸ್ವಿ ಈವೆಂಟ್ಸ್ರಿಂದ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ.

ಫೆ.27 ರಂದು ಬೆಳಗ್ಗೆ 11.18 ರಿಂದ 11.40 ಗಂಟೆವರೆಗೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ರಾಮಲಿಂಗೇಶ್ವರಸ್ವಾಮಿ ರಥೋತ್ಸವ ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ರಾತ್ರಿ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.