ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಉಪದೇಶಗಳಲ್ಲಿ ಅತ್ಯಂತ ಮಹತ್ತರವಾದ ವಿಷಯ ಎಂದರೆ ಪ್ರಾರ್ಥನೆ. ಪರಮಹಂಸರು ಪ್ರಾರ್ಥನೆ ನಿವೇದನೆ ಎಂಬೀ ವಿಚಾರಗಳ ಮೇಲೆ ಅನೇಕ ರೀತಿಯಲ್ಲಿ ತಮ್ಮದೇ ಆದ ಸುಂದರ, ಸರಳ ಹಾಗೂ ಸುಲಭ ಉಪಾಯ ವಿವರಿಸಿರುತ್ತಾರೆ.
ಭಕ್ತ : ಪ್ರಾಪಂಚಿಕರಿಗೆ ನಿಜವಾದ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಲು ಅನ್ಯ ಮಾರ್ಗವೇ ಇಲ್ಲವೇ?
ರಾಮಕೃಷ್ಣರು : ಯಾಕಿಲ್ಲ? ಖಂಡಿತ ಮಾರ್ಗಗಳಿವೆ. ಅವುಗಳಲ್ಲಿ ಎರಡು ಮುಖ್ಯವಾದವು. ಒಂದು ವಿವೇಚನಾ ಶಕ್ತಿಯಿಂದ ಕೂಡಿದ್ದು; ಮತ್ತೊಂದು ಭಗವತ್ಪ್ರೇಮ. ವಿವೇಕ ಬುದ್ಧಿ ಎಂದರೆ ಯಾವುದು ಸತ್ಯ, ಯಾವುದು ಅಸತ್ಯ ಎಂಬುದರ ಪೂರ್ಣ ಮಾಹಿತಿ. ಭಗವಂತನೊಬ್ಬನೇ ಸತ್ಯ, ಉಳಿದೆಲ್ಲವೂ ಅಸತ್ಯ. ಈ ಸತ್ಯವನ್ನು ಅರಿತು ಭಗವದ್ ಶಕ್ತಿಯೇ ಸದಾ ಅಮರವಾದದ್ದು ಎಂಬುದನ್ನು ಅರಿಯುವುದು. ಉಳಿದದ್ದೆಲ್ಲಾ ಅನಿತ್ಯ, ಅಸುಖ ಹಾಗೂ ಕೇವಲ ಭ್ರಮೆ ಮತ್ತು ಅಶಾಶ್ವತ ಎಂದು ಅರಿಯುವುದು. ಹೇಗೆ ಜಾದೂಗಾರನಿಗೆ ಮಾತ್ರ ತನ್ನ ಜಾದುವಿನ ಪೂರ್ಣ ಅರಿವು ಇರುತ್ತದೆಯೋ ಹಾಗೆಯೇ. ಇದೇ ನಿಜವಾದ ವಿವೇಕ.
ಭಕ್ತ: ಗುರುಗಳೇ, ತಾವು ಎರಡು ಮಾರ್ಗವನ್ನು ತಿಳಿಸಿದಿರಿ. ಮತ್ತೊಂದು ಮಾರ್ಗತಿಳಿಸುವಿರಾ ?
ರಾಮಕೃಷ್ಣರು: ಭಕ್ತಿ ಮಾರ್ಗವೇ ಮತ್ತೊಂದು. ಅಂದರೆ ಅವಿರತ ಭಗವತ್ ಪ್ರೇಮ. ಭಗವಂತನನ್ನು ಸಂಪೂರ್ಣವಾಗಿ ಪ್ರೀತಿಸುವುದೇಮತ್ತೊಂದು ಪಥ. ಭಗವಂತನಿಗಾಗಿ ಏಕಪ್ರಕಾರವಾಗಿ ಮೊರೆಯಿಡುವುದು, ಆರ್ತ ನಾದದಿಂದ ಅವನ ಸಾಕ್ಷಾತ್ಕಾರಕ್ಕಾಗಿ ಕಣ್ಣೀರಿಡುವುದು, ಪ್ರಾರ್ಥಿಸುವುದು. ಆ ಭವತಾರಿಣಿಯ ದರ್ಶನಕ್ಕೆ ಏಕ ಪ್ರಕಾರವಾಗಿ ಹಂಬಲಿಸುವುದು ಎಂದರ್ಥ. ಒಂದು - ವಿವೇಕದಿಂದ ಈ ಜಗತ್ತಿನ ಸತ್ಯಾಸತ್ಯತೆಯ ಅರಿವನ್ನು ಹೊಂದುವುದು, ಮತ್ತೊಂದು- ಭಗವತ್ ಪ್ರೇಮ ಅಥವಾ ಭಕ್ತಿ ಮಾರ್ಗ. ಮತ್ತೊಂದು ಸಂದರ್ಭದಲ್ಲಿ ಭಕ್ತನಾದ ವೈಷ್ಣವ ಚರಣ ನಿಜವಾದ ಪ್ರಾರ್ಥನೆಯ ಮಾರ್ಗವೇನು? ಎನ್ನುತ್ತಾನೆ.
ಅದಕ್ಕೆ ಪರಮಹಂಸರ ಉತ್ತರ ಹೀಗಿತ್ತು: ‘ನಿಜ, ಭಗವಂತನ ಪವಿತ್ರ ನಾಮದ ಫಲ ಅಪಾರ. ಆದರೆ ಕೇವಲ ನಾಮೋಚ್ಚಾರಣೆಯಲ್ಲ, ಭಗವತ್ ಪ್ರೀತಿ ಬೆಳೆಸಿಕೊಳ್ಳಬೇಕು. ಹೃದಯಾಂತರಾಳದಿಂದ ಭಗವದ್ದರುಶನಕ್ಕೆ ಯಾಚಿಸಬೇಕು. ಯಾಂತ್ರಿಕವಾಗಿ ಭಗವನ್ನಾಮ ಸ್ಮರಣೆ ಮಾಡುತ್ತಾ, ಮನಸ್ಸಿನಲ್ಲಿ ಕಾಮಿನಿ-ಕಾಂಚನದ ಚಿಂತೆಯಿದ್ದಲ್ಲಿ ಏನು ಫಲ?’ ಇದು ಘೊರ ಸತ್ಯ.ಅರ್ಚನೆ, ಆರಾಧನೆ, ಪೂಜೆ ಇತ್ಯಾದಿಗಳನ್ನು ಯಾಂತ್ರಿಕವಾಗಿನಡೆಸುತ್ತ ಮನಸ್ಸು ಪ್ರಾಪಂಚಿಕ ವಿಷಯ ವಸ್ತುಗಳಲ್ಲೇ ಮಗ್ನ ವಾಗಿರುವುದು ಸರ್ವೆ ಸಾಮಾನ್ಯ. ಈ ಕಾರಣದಿಂದಲೇ ರಾಮಕೃಷ್ಣರು ಪ್ರಾರ್ಥನೆ ಯನ್ನು ಅರ್ಪಿಸುವ ಮುನ್ನ ಮನಸ್ಸು ಪರಿಶುದ್ಧವಾಗಿ ಪ್ರಾಪಂಚಿಕ ವಿಷಯ ಭೋಗ ವಸ್ತುಗಳತ್ತ ಚಿತ್ತವನ್ನಿಡದೆ ಭಗವಂತನ ಪಾದಾರವಿಂದಗಳಲ್ಲಿ ಸಮರ್ಪಿತವಾಗಿರಬೇಕು ಎಂದು ಎಚ್ಚರಿಸುತ್ತಿದ್ದರು.
ಅದೊಂದು ಸತ್ಸಂಗದ ಸಂದರ್ಭ. ಭಕ್ತನೋರ್ವ ಈ ಪ್ರಶ್ನೆ ಯನ್ನು ಕೇಳುತ್ತಾನೆ. ‘ಮಾರ್ಗ ಯಾವುದು, ಪ್ರೀತಿಯೋ ಅಥವಾ ಪ್ರಾರ್ಥನೆಯೋ ?’ರಾಮಕೃಷ್ಣರು, ‘ಮೊದಲು ಭಗವತ್ಪ್ರೇಮ ನಂತರ ಪ್ರಾರ್ಥನೆ’ ಎನ್ನುತ್ತಾರೆ. ಇದು ಬಹುಶಃ ಈಗಿನ ಕಾಲಘಟ್ಟದಲ್ಲಿ ಸಾಧಕರು ಅರಿಯಲೇಬೇಕಾದ ಅಂಶ. ಮೊದಲು ಭಗವತ್ಪ್ರೀತಿ, ನಂತರ ಪ್ರಾರ್ಥನೆ. ಕ್ಯಾಸೆಟ್, ಧ್ವನಿ ಮುದ್ರಿಕೆಗಳ ಏಕಪ್ರಕಾರವಾದ ಹಾಡು, ನಿವೇದನೆಗಳು, ಮಂತ್ರಗಳು ನಿಜವಾದ ಅರ್ಥದಲ್ಲಿ ಪ್ರಾರ್ಥನೆ, ಮೊರೆ, ನಿವೇದನೆ ಅಲ್ಲ. ಕಾರಣ ಇಲ್ಲಿ ಯಾವುದೇ ತೆರನಾದ ಭಗವದ್ ವ್ಯಾಕುಲತೆ ಕಾಣಬರುವುದಿಲ್ಲ. ಕೇವಲ ಶಬ್ದಝುರಿ ಅಷ್ಟೇ, ನಮ್ಮೆಲ್ಲರ ಪಾಡೂ ಇದೇ. ಧ್ವನಿ ಸುರಳಿಯ ರೀತಿ. ಯಾವುದೇ ಭಕ್ತಿಯಿಂದ ಹೊರ ಬರುತ್ತಿರುವ ಮೊರೆಯಲ್ಲ, ಪ್ರಾರ್ಥನೆಯಲ್ಲ, ಕೇವಲ ಗಂಟಲಿನಿಂದ ಹೊರಸೂಸುತ್ತಿರುವ ವೈವಿದ್ಯಮಯ ಪದಗಳು ಮಾತ್ರ.
ಪರಮಹಂಸರ ಪ್ರಕಾರ ಭಗವದ್ ಪ್ರೀತಿಯೊಂದಿಗೆ, ವ್ಯಾಕುಲತೆ ಯೊಂದಿಗೆ, ಭಗವಂತನನ್ನು ಒಂದು ಕ್ಷಣವೂ ಬಿಡದೆ ಬದುಕಲಾರೆ ಎಂಬ ಹೃದಯಾಂತರಾಳದ ಆರ್ತನಾದದೊಂದಿಗೆ ಪ್ರಾರ್ಥಿಸಿದ ಾಗಲೇ ನಿಜವಾದ ಪ್ರಾರ್ಥನೆ. ಹಾಗಾದರೆ ಪ್ರಾಪಂಚಿಕರಿಗೆ ಪ್ರಾರ್ಥಿಸಲು ಅನ್ಯಮಾರ್ಗವೇ ಇಲ್ಲವೇ? ‘ಇದೆ, ಆಧ್ಯಾತ್ಮಿಕತೆ ಹಾಗೂ ಸಾಂಸಾರಿಕತೆ ಎರಡೂ ಒಟ್ಟಿಗೆ ಪಥಿಸಲು ಅತ್ಯಂತ ಕಷ್ಟ. ಸಾಂಸಾರಿಕ ಜೀವನ ಎಂದರೆ; ನೋವು, ರೋಗರುಜಿನ, ಸುಖ ದುಃಖ, ಸುತ್ತಲೂ ಹೆಂಡತಿ, ಮಕ್ಕಳ ನಕಾರಾತ್ಮಕ ಸನ್ನಿವೇಶ. ಇವುಗಳ ಮಧ್ಯೆ ಬಡತನ, ಸಿರಿತನಗಳ ಕಣ್ಣಾಮುಚ್ಚಾಲೆ, ಇನ್ನೂ ಪಟ್ಟಿ ದೊಡ್ಡದಿದೆ. ಆದರೂ ಒಂದು ಮಾರ್ಗವಿದೆ. ಅದೇ ಭಗವಂತನನ್ನು ಪ್ರಾರ್ಥಿಸುವುದು, ಭಗವಂತನಿಲ್ಲದೆ ಬದುಕು ವ್ಯರ್ಥ ಎಂಬುದರ ಸಂಪೂರ್ಣ ಅರ್ಥವನ್ನು ಅರಿತವನೇ ನಿಜವಾದ ಭಕ್ತ. ಅವನ ಪ್ರಾರ್ಥನೆಗೆ ಅತ್ಯಮೂಲ್ಯವಾದ ಉತ್ತರ ದೊರಕುತ್ತದೆ. ಇದೇ ನಿಜವಾದ ಪ್ರಾರ್ಥನೆ’ ಎಂದು ರಾಮಕೃಷ್ಣರು ವಿವರಿಸುತ್ತಾರೆ.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)
(ಪ್ರತಿಕ್ರಿಯಿಸಿ: vvsudina@.com,swajapa@gmail.com)