ನ್ಯೂಸ್

ರಾಮಮಂದಿರಕ್ಕೆ ನೂರು ಅಡಿಯ ಬುನಾದಿ; 17ರ ನಂತರ ರಾಮಮಂದಿರ ಅಡಿಪಾಯ ಕಾರ್ಯ

ಅಯೋಧ್ಯೆ: ಭವ್ಯ ಶ್ರೀರಾಮ ಮಂದಿರದ ಅಡಿಪಾಯ ಕಾಮಗಾರಿ ಪಿತೃಪಕ್ಷ ಕಳೆದ ಮೇಲೆ (ಸೆ. 17ರ ನಂತರ) ಆರಂಭವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ. ಪಿತೃಪಕ್ಷದ 15 ದಿನಗಳು, ಗತಿಸಿದ ಮನೆಯ ಹಿರಿಯರನ್ನು ಸ್ಮರಿಸುವ ಕಾಲವಾದ ಕಾರಣ ಈ ದಿನಗಳಲ್ಲಿ ಶುಭಕಾರ್ಯ ಮಾಡುವುದಿಲ್ಲ.

ಲಾರ್ಸನ್ ಆಂಡ್ ಟ್ಯೂಬ್ರೊ (ಎಲ್​ಆಂಡ್​ಟಿ) ಕಂಪನಿ ಅಡಿಪಾಯ ಕಾಮಗಾರಿ ನಿರ್ವಹಿಸಲಿದ್ದು, ಶ್ರೀರಾಮ ಜನ್ಮಭೂಮಿ ಆವರಣದ 12,879 ಚದರ ಮೀಟರ್​ನಲ್ಲಿ ಈ ಕೆಲಸ ನಡೆಯಲಿದೆ. ಇದಕ್ಕಾಗಿ ಕಂಪನಿ ಒಂದು ರೂಪಾಯಿಯನ್ನೂ ಪಡೆಯುತ್ತಿಲ್ಲ ಎಂದು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಡಿಪಾಯ ಹಾಕಲಾಗುತ್ತದೆ. ಇದರ ಧಾರಣಾ ಸಾಮರ್ಥ್ಯ 1,000ದಿಂದ 1,500 ವರ್ಷದಷ್ಟಿರಬೇಕು ನಿರ್ಧರಿಸಲಾಗಿದೆ. ಯಾವುದೇ ಭೂಕಂಪ ಮತ್ತು ಬಿರುಗಾಳಿಗೂ ಜಗ್ಗದ ಬಲಿಷ್ಠ ಬುನಾದಿ ನಿರ್ವಿುಸಲು ರೂರ್ಕಿಯಲ್ಲಿರುವ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್​ಐ) ಮತ್ತು ಮದ್ರಾಸ್ ಐಐಟಿಗಳಿಂದ ಸಲಹೆಯನ್ನು ಪಡೆಯಲಾಗಿದೆ ಎಂದು ರೈ ತಿಳಿಸಿದ್ದಾರೆ. ಆ. 5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ. ಕಳೆದ ವಾರ ಮಂದಿರದ ನಕ್ಷೆಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಅನುಮೋದನೆ ನೀಡಿದ್ದು, ಇದರಲ್ಲಿ ಶ್ರೀರಾಮ ಮಂದಿರ ಮತ್ತು ರಾಮ ಜನ್ಮಭೂಮಿ ಕ್ಯಾಂಪಸ್​ನ ಎರಡು ಕಾಮಗಾರಿಗಳಿವೆ. ರಾಮ ಮಂದಿರ ಐದು ಪ್ರಧಾನ ಗೋಪುರಗಳನ್ನು ಒಳಗೊಂಡಿರಲಿದೆ.

ಕಳೆದ ವರ್ಷ ನ. 9ರಂದು ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದ ಪ್ರಕರಣವನ್ನು ಬಗೆಹರಿಸಿದ ಸುಪ್ರೀಂಕೋರ್ಟ್, ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿತ್ತು. ಮಂದಿರ ನಿರ್ಮಾಣ ಸಂಬಂಧ 90 ದಿನಗಳಲ್ಲಿ ಟ್ರಸ್ಟ್ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕಳೆದ ಫೆಬ್ರವರಿಯಲ್ಲಿ ಟ್ರಸ್ಟ್ ರಚಿಸಲಾಗಿದ್ದು, ಮಹಾಂತ ನೃತ್ಯ ಗೋಪಾಲದಾಸ್ ಇದರ ಅಧ್ಯಕ್ಷರಾಗಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ನಿರ್ವಣಕ್ಕಾಗಿ 5 ಎಕರೆ ಜಾಗವನ್ನು ಸುನ್ನಿ ವಕ್ಪ್ ಮಂಡಳಿಗೆ ನೀಡುವಂತೆಯೂ ಐವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಸೂಚಿಸಿತ್ತು. ಇದರ ಅನುಸಾರ ಉತ್ತರ ಪ್ರದೇಶದ ಸರ್ಕಾರ ಅಯೋಧ್ಯೆ ಬಳಿಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಜಾಗವನ್ನು ಮಂಜೂರು ಮಾಡಿದೆ. ಮಸೀದಿ ನಿರ್ಮಾಣ ಸಂಬಂಧ ಟ್ರಸ್ಟ್ ಕೂಡ ರಚನೆಯಾಗಿದೆ.

ನೂರು ಅಡಿಯ ಬುನಾದಿ: ಮಂದಿರ ನಿರ್ವಣಕ್ಕೆ ಸುಮಾರು 100 ಅಡಿ ಆಳದಿಂದ ಬುನಾದಿ ನಿರ್ಮಾಣ ಆಗುತ್ತದೆ. 1,200 ಕಂಬಗಳನ್ನು (ಪಿಲ್ಲರ್) ಹಾಕಲಾಗುತ್ತದೆ. ಈ ಕಂಬಗಳಿಗೆ ಕಬ್ಬಿಣ ಬಳಕೆ ಮಾಡುವುದಿಲ್ಲ, ಕಲ್ಲಿನಿಂದಲೇ ಇದನ್ನು ಕಟ್ಟಲಾಗುತ್ತದೆ. ಈ ಕಂಬಗಳ ಮೇಲೆ ಇನ್ನೊಂದು ಸುತ್ತಿನ ಅಡಿಪಾಯ ಹಾಕಲಾಗುತ್ತದೆ. ಬುನಾದಿ ನಿರ್ವಣಕ್ಕಾಗಿ ಮುಂಬೈ ಮತ್ತು ಹೈದರಾಬಾದ್​ಗಳಿಂದ ಅಗತ್ಯ ಯಂತ್ರಗಳನ್ನು ಎಲ್​ಆಂಡ್​ಟಿ ತರಿಸಿಕೊಂಡಿದ್ದು, ಕನಿಷ್ಠ 100 ಕಾರ್ವಿುಕರು ಈ ಕಾಮಗಾರಿಯಲ್ಲಿ ತೊಡಗಲಿದ್ದಾರೆ. ಇವರೆಲ್ಲರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಿದ ನಂತರವಷ್ಟೆ ಕಾಮಗಾರಿ ಸ್ಥಳಕ್ಕೆ ಕಳುಹಿಸಲಾಗುತ್ತದೆ. ರಾಮಜನ್ಮ ಭೂಮಿ ಕ್ಯಾಂಪಸ್​ಗೆ ಪ್ರತಿದಿನ ಪ್ರವೇಶ ಪಡೆಯುವುದಕ್ಕೂ ಮುನ್ನ ಥರ್ಮಲ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ.