ನವದೆಹಲಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕರೊನಾ ಕಾರಣದಿಂದಾಗಿ ಅಂದಾಜು 200 ಜನರಿಗಷ್ಟೇ ಟ್ರಸ್ಟ್ನಿಂದ ಆಹ್ವಾನ ನೀಡಲಾಗಿದೆ. ಈ ಮೊದಲು 250 ಜನರಿಗೆ ಆಹ್ವಾನಿಸುವ ಉದ್ದೇಶ ಹೊಂದಲಾಗಿತ್ತು.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೊರತುಪಡಿಸಿ ಬೇರಾವ ರಾಜ್ಯದ ಸಿಎಂಗಳನ್ನು ಆಹ್ವಾನಿಸಲಾಗಿಲ್ಲ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅತಿಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ಇದರಂತೆ ಆಗಸ್ಟ್ ಐದರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಲಾಲ್ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್, ಜೈಭಾನ್ ಸಿಂಗ್ ಪೊವಯ್ಯ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಮುಖರಾಗಿದ್ದಾರೆ.
ಟ್ರಸ್ಟ್ನ 15 ಸದಸ್ಯರೂ ಇರಲಿದ್ದಾರೆ. ಇದಲ್ಲದೇ, ಆಹ್ವಾನ ನೀಡಲಾಗಿರುವ ಪ್ರಮುಖ ಸ್ವಾಮೀಜಿಗಳೆಂದರೆ, ಶ್ರೀ ಮಹೇಂದ್ರ ನಿತ್ಯ ಗೋಪಾಲ ದಾಸ್, ಶ್ರೀ ಸ್ವಾಮಿ ಗೋವಿಂದ್ ದೇವ್ ಗಿರಿ, ಶ್ರೀ ಚಂಪತ್ ರೈ ಮೊದಲಾದವರು. ಕರ್ನಾಟಕದಿಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಹ್ವಾನಿತರಾಗಿದ್ದಾರೆ. ಆದರೆ, ಶ್ರೀಗಳು ಚಾತುರ್ಮಾಸ್ಯದಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಇದಲ್ಲದೇ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ವಿಶ್ವ ಹಿಂದು ಪರಿಷದ್ನ ಅಧ್ಯಕ್ಷ ಅಲೋಕ್ ಕುಮಾರ್ ಸೇರಿ ಇವೆರಡೂ ಸಂಘಟನೆಗಳು ಇತರ ಪ್ರಮುಖರಿಗೂ ಆಹ್ವಾನ ನೀಡಲಾಗಿದೆ.
40 ಕೆಜಿ ಬೆಳ್ಳಿ ಗಟ್ಟಿಯನ್ನು ಗರ್ಭಗುಡಿಯ ಆಳದಲ್ಲಿರುವ ಮೂಲಕ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಆಗಸ್ಟ್ 3ರಂದು ದಿನವಿಡೀ ವೈದಿಕ ವಿಧಿ-ವಿಧಾನಗಳು ನಡೆಯಲಿವೆ.