ನ್ಯೂಸ್

ಇನ್ನು ದಾರಿಗಳೆಲ್ಲ ಅಯೋಧ್ಯೆ ಕಡೆಗೆ: ವಾರ್ಷಿಕ 50 ಮಿಲಿಯನ್​ ಪ್ರಯಾಣಿಕರು!

ಅಯೋಧ್ಯೆ: ದೇಶದ ಜನತೆಯ ಬಹುದಿನಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ ಕೊನೆಗೂ ನನಸಾಗಿದೆ. ಗರ್ಭಗುಡಿಯಲ್ಲಿ ಬಾಲ ರಾಮನನ್ನು ಪ್ರತಿಷ್ಠಾಪಿಸಿದ ಕ್ಷಣಗಳನ್ನು ಇಡೀ ವಿಶ್ವದಾದ್ಯಂತ ಜನ ಕಣ್ತುಂಬಿಕೊಂಡಿದ್ದಾರೆ. ಜನವರಿ 23(ಮಂಗಳವಾರ) ರಿಂದ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಕಾರಣದಿಂದಾಗಿ ವಿಶ್ವದಾದ್ಯಂತದ ರಾಮ ಭಕ್ತರು ಬಲರಾಮನನ್ನು ನೇರವಾಗಿ ನೋಡಲು ಅಯೋಧ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ಐತಿಹಾಸಿಕ ನಗರಕ್ಕೆ ನಿತ್ಯ ಎಷ್ಟು ಮಂದಿ ಬರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.

ಸದ್ಯದ ಮಾಹಿತಿ ಪ್ರಕಾರ ಅಯೋಧ್ಯೆಗೆ ನಿತ್ಯ 1 ರಿಂದ 1.5 ಲಕ್ಷ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆ ಜೆಫರೀಸ್ ಗ್ರೂಪ್ ಅಂದಾಜಿಸಿದೆ. ಇದು ದೇಶದ ಪ್ರವಾಸೋದ್ಯಮದ ಮುಖವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ.

ಅಯೋಧ್ಯೆಯು ದೇಶದಲ್ಲಿ ಹೊಸ ಪ್ರವಾಸಿ ಕೇಂದ್ರವಾಗಲಿದೆ ಎಂದು ದೇಶೀಯ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳು ನಂಬಿವೆ. ರಾಮಮಂದಿರ ಉದ್ಘಾಟನೆಯ ನಂತರ ಪ್ರತಿ ವರ್ಷ 5 ಕೋಟಿ ಯಾತ್ರಾರ್ಥಿಗಳು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಜೆಫರೀಸ್ ವರದಿ ಅಂದಾಜಿಸಿದೆ.

ಅಯೋಧ್ಯೆಯಲ್ಲಿ ನಗರದಲ್ಲಿ ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ. ನವೀಕರಿಸಿದ ರೈಲು ನಿಲ್ದಾಣ, ರಸ್ತೆ ಸಾರಿಗೆ ವ್ಯವಸ್ಥೆಯ ಸುಧಾರಣೆ, ಹೊಸ ಹೋಟೆಲ್‌ಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳು ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಲಿವೆ ಎಂದು ಅದು ಹೇಳಿದೆ. ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಅದು ಹೇಳಿದೆ.

'1800 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದೇ ಸಮಯದಲ್ಲಿ ಅಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಅಂತಹ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

ದೇಗುಲ ಉದ್ಘಾಟನೆ ಬಳಿಕ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಹಲವು ಕ್ಷೇತ್ರಗಳಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ವಿಶೇಷವಾಗಿ ಹೋಟೆಲ್‌, ವಿಮಾನಯಾನ, ಆತಿಥ್ಯ, ಪ್ರಯಾಣದ ಪರಿಕರಗಳು ಮತ್ತು ಸಿಮೆಂಟ್ ವಲಯಗಳಿಗೆ ಲಾಭವಾಗಲಿದೆ. ಇದು ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮಾದರಿಯಾಗಲಿದೆ. ಈ ಐತಿಹಾಸಿಕ ನಗರ ಇನ್ನು ಮುಂದೆ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಲಿದೆ.