ನ್ಯೂಸ್

ಆಕ್ಷನ್-ಕಟ್ ಹೇಳೋಕೆ ಕಂಗನಾ ರೆಡಿ: ರಾಮಮಂದಿರ ಕುರಿತು ಚಿತ್ರ ನಿರ್ದೇಶನ

‘ಮಣಿಕರ್ಣಿಕಾ’ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಕಂಗನಾ ರಣಾವತ್ ಹೊತ್ತುಕೊಂಡಿದ್ದು ಅಚಾನಕ್ ಆಗಿ. ಕಾರಣಾಂತರಗಳಿಂದ ಚಿತ್ರತಂಡದಲ್ಲಿ ಬಿರುಕು ಮೂಡಿ, ನಿರ್ದೇಶಕರು ಹೊರಬಿದ್ದಾಗ, ಕಂಗನಾ ನಿರ್ದೇಶಕರಾದರು. ಇನ್ನು ಅವರು ನಿರ್ದೇಶನದತ್ತ ತಲೆ ಹಾಕುವುದಿಲ್ಲ ಎಂದು ಎಲ್ಲರೂ ಭಾವಿಸಿರುವಾಗಲೇ, ಕಂಗನಾ ಇನ್ನೊಂದು ಚಿತ್ರಕ್ಕೆ ಆಕ್ಷನ್-ಕಟ್ ಹೇಳೋಕೆ ಸಿದ್ಧತೆ ನಡೆಸಿದ್ದಾರೆ.

ಕಂಗನಾ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರು ‘ಅಪರಾಜಿತ ಅಯೋಧ್ಯ’. ರಾಮ ಜನ್ಮಭೂಮಿಯ 600 ವರ್ಷಗಳ ಇತಿಹಾಸದ ಕುರಿತಾದ ಈ ಚಿತ್ರಕ್ಕೆ, ‘ಬಾಹುಬಲಿ’ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ ಬರೆದಿದ್ದಾರೆ. ಈ ಕುರಿತು ಮಾತನಾಡಿರುವ ಕಂಗನಾ, ‘ರಾಮಮಂದಿರ ಎನ್ನುವುದು ಬರೀ ದೇವಸ್ಥಾನವಲ್ಲ. ಅದೊಂದು ಸೆಂಟಿಮೆಂಟ್. ಈ ದೇವಸ್ಥಾನದ ವಿಷಯವಾಗಿ ಆರು ಶತಮಾನಗಳ ಹೋರಾಟವಿದೆ. ಆಗ ಶುರುವಾದ ಹೋರಾಟ, ಈಗ ದೇವಸ್ಥಾನದ ಶಿಲಾನ್ಯಾಸದವರೆಗೂ ಬಂದಿದೆ. ಅದೆಲ್ಲವನ್ನೂ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಬಹಳ ಕಷ್ಟವಾದ ಚಿತ್ರಕಥೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ರಾಮಮಂದಿರದ ಶಿಲಾನ್ಯಾಸದ (ಆಗಸ್ಟ್ 5) ದಿನದಂದೇ ಕಂಗನಾ ಚಿತ್ರದ ಲೋಗೋ ಸಹ ಬಿಡುಗಡೆ ಮಾಡಿದ್ದು, ಶಿಲಾನ್ಯಾಸದ ದೃಶ್ಯಗಳು ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಕಂಗನಾಗೆ ಚಿತ್ರ ನಿರ್ದೇಶಿಸುವ ಯೋಚನೆ ಇರಲಿಲ್ಲವಂತೆ. ‘ಮೊದಲು ಈ ಚಿತ್ರವನ್ನು ನಾನು ನಿರ್ವಿುಸಿ, ಬೇರೆಯವರಿಗೆ ನಿರ್ದೇಶಿಸುವುದಕ್ಕೆ ಬಿಡಬೇಕು ಎಂದುಕೊಂಡಿದ್ದೆ. ಆದರೆ, ಸಹ-ನಿರ್ವಪಕರು ಈ ಚಿತ್ರವನ್ನು ನೀವೇ ನಿರ್ದೇಶಿಸಿದರೆ ಚೆನ್ನ ಎಂದರು. ಇದೊಂದು ದೊಡ್ಡ ಕ್ಯಾನ್ವಾಸ್​ನ ಚಿತ್ರವಾದ್ದರಿಂದ ಮತ್ತು ‘ಮಣಿಕರ್ಣಿಕಾ’ದಂತಹ ದೊಡ್ಡ ಕ್ಯಾನ್ವಾಸ್ ಚಿತ್ರವನ್ನು ನಿರ್ದೇಶಿಸಿರುವ ಅನುಭವ ಇರುವುದರಿಂದ ನೀವೇ ನಿರ್ದೇಶನ ಮಾಡಿ ಎಂದರು. ಅವರೆಲ್ಲರ ಒತ್ತಾಯಕ್ಕೆ ಒಪ್ಪಬೇಕಾಯಿತು’ ಎಂದು ಕಂಗನಾ ಹೇಳಿದ್ದಾರೆ.