ಯುಪಿ ಮತದಾರರ ಪಟ್ಟಿಯಲ್ಲಿ 'ರಾಮ್ ನೇ ಯಾದವ್ ಕೊ ಮಾರಾ' ಎಂಬ ಹಾಸ್ಯಾಸ್ಪದ ಹೆಸರುಗಳು
ಇಂಗ್ಲಿಷ್‌ನಿಂದ ಹಿಂದಿಗೆ ಟ್ರಾನ್ಸ್ಲೇಷನ್ ಬದಲು ಸಾಫ್ಟ್‌ವೇರ್ ನೇರವಾಗಿ ಅನುವಾದಿಸಿದ್ದೇ ಎಡವಟ್ಟು
ಪಿಲಿಭಿತ್‌ನಲ್ಲೂ ಸಮಸ್ಯೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಹಾಗೂ ಕಂಪ್ಯೂಟರ್ ಸಹಾಯಕ ವಜಾ
UP election commission: ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ವೋಟರ್‌ಗಳ ಹೆಸರುಗಳು ತುಂಬಾ ವಿಚಿತ್ರವಾಗಿ ಪ್ರಿಂಟ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿವೆ. 'ರಾಮ್ ನೇ ಯಾದವ್ ಕೊ ಮಾರಾ' ಹಾಗೂ ಅಪ್ಪನ ಹೆಸರಿನ ಜಾಗದಲ್ಲಿ 'ಬಿ.ಕಾಮ್' ಅಂತ ಬರೆದಿರೋದು ನೋಡಿದ್ರೆ ಯಾವುದೋ ಕಾಮಿಡಿ ಸ್ಕ್ರಿಪ್ಟ್ ತರ ಕಾಣಿಸುತ್ತದೆ.
ಈ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಯುಪಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿದೆ. ಆನ್‌ಲೈನ್ ನೋಂದಣಿ ಆರಂಭವಾದ ಬಳಿಕ ಇಂಗ್ಲಿಷ್‌ನಲ್ಲಿದ್ದ ಹೆಸರುಗಳನ್ನು ಹಿಂದಿಗೆ ಪರಿವರ್ತಿಸುವಾಗ ಈ ತಾಂತ್ರಿಕ ದೋಷ ಸಂಭವಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸಾಫ್ಟ್‌ವೇರ್ ಲಿಪ್ಯಂತರ (Transliteration) ಮಾಡಬೇಕಿದ್ದ ಜಾಗದಲ್ಲಿ ಪದಗಳ ಅರ್ಥವನ್ನು ನೇರವಾಗಿ ಅನುವಾದ (Translation) ಮಾಡಿದೆ.
ಉದಾಹರಣೆಗೆ 'Ram hit Yadav' ಅಂತ ಇಂಗ್ಲಿಷ್‌ನಲ್ಲಿ ಟೈಪ್ ಆಗಿದ್ದನ್ನ ಸಾಫ್ಟ್‌ವೇರ್ 'ರಾಮ್ ನೇ ಯಾದವ್ ಕೊ ಮಾರಾ' ಅಂತ ತಪ್ಪಾಗಿ ಭಾಷಾಂತರ ಮಾಡಿಕೊಂಡಿದೆ. ಒಟ್ಟು 14 ಲಕ್ಷಕ್ಕೂ ಹೆಚ್ಚು ಎಂಟ್ರಿಗಳಲ್ಲಿ ಇಂತಹ 158 ತಪ್ಪುಗಳು ಕಂಡುಬಂದಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಆಯೋಗ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ.
ಮತ್ತೊಂದೆಡೆ, ಪಿಲಿಭಿತ್ ಸಾದರ್ ಕ್ಷೇತ್ರದಲ್ಲೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ. ಯಾವುದೇ ಸರಿಯಾದ ದಾಖಲೆಗಳಿಲ್ಲದಿದ್ದರೂ ಸಾವಿರಾರು ಅರ್ಜಿಗಳಿಗೆ ಅಪ್ರೂವಲ್ ಕೊಟ್ಟಿದ್ದಕ್ಕೆ ಸಂಬಂಧಪಟ್ಟಂತೆ ಇಬ್ಬರು ಚುನಾವಣಾ ನೋಂದಣಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಕಂಪ್ಯೂಟರ್ ಅಸಿಸ್ಟೆಂಟ್‌ನನ್ನು ಕೆಲಸದಿಂದ ವಜಾ ಮಾಡಲಾಗಿದೆ. (ಏಜೆನ್ಸೀಸ್)