BBK 12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿ ಚಾಲನೆ ದೊರೆಕಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಸುದೀಪ್ ಅವರೇ ನಡೆಸಿಕೊಡುತ್ತಿದ್ದು, ಈ ಬಾರಿ ಬಿಗ್ ಮನೆಯೊಳಗೆ 19 ಸ್ಪರ್ಧಿಗಳನ್ನು ಕಳುಹಿಸಿದ್ದಾರೆ. ಆರಂಭದಲ್ಲಿ ಇದು ವೀಕ್ಷಕರ ಕುತೂಹಲ ಹೆಚ್ಚಿಸಿದ್ದೇ ಆದರೂ ಇದೀಗ ಶಾಕಿಂಗ್ ಟ್ವಿಸ್ಟ್ಗಳನ್ನು ಕಂಡು ಅಕ್ಷರಶಃ ಗೊಂದಲಕ್ಕೀಡಾಗಿದ್ದಾರೆ.
ಮೊದಲ ದಿನವೇ ಎಲಿಮಿನೇಷನ್ ಶಾಕ್ ಕೊಟ್ಟ ಬಿಗ್ ಬಾಸ್, ಎರಡನೇ ದಿನಕ್ಕೆ ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಇದು ಮೊದಲು ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಮನೆಯಿಂದ ಯಾರಾದರೂ ಒಬ್ಬರನ್ನು ಒಮ್ಮತದಿಂದ ಮನೆ ಮಂದಿಯೆಲ್ಲ ಸೇರಿ ಹೊರ ಕಳಿಸಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಅಂತೆಯೇ ಸ್ಪಂದನಾ, ಮಲ್ಲು ಮತ್ತು ರಕ್ಷಿತಾ ಶೆಟ್ಟಿ ಪೈಕಿ ಮಂಗಳೂರಿನ ರಕ್ಷಿತಾಗೆ ಗೇಟ್ಪಾಸ್ ನೀಡಲಾಯಿತು. ಸದ್ಯ ಇದು ವೀಕ್ಷಕರ ಅಚ್ಚರಿಗೆ ಕಾರಣವಾಗಿದೆ.
ಈ ಹಿಂದಿನ ಬಿಗ್ ಬಾಸ್ ಸೀಸನ್ಗಳಲ್ಲಿ ಮನೆಯೊಳಗೆ ಬಂದ ಸ್ಪರ್ಧಿಗಳು ಒಂದು ವಾರ ಪೂರೈಸಿದ ಬಳಿಕ ಜನರ ಮತಗಳ ಆಧಾರದ ಮೇರೆಗೆ ಎಲಿಮಿನೇಟ್ ಆಗುತ್ತಿದ್ದರು. ಈ ಒಂದು ವಾರದಲ್ಲಿ ಆ ಸ್ಪರ್ಧಿಗೆ ಮನೆಯವರೊಂದಿಗೆ ಮತ್ತು ವೀಕ್ಷಕರಿಗೆ ಇನ್ನಷ್ಟು ಪರಿಚಯವಾಗಲು ಸಮಯವಾದರೂ ಸಿಗುತ್ತಿತ್ತು. ಆದರೆ, 12ನೇ ಆವೃತ್ತಿಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. 2ನೇ ದಿನಕ್ಕೆ ರಕ್ಷಿತಾರನ್ನು ಮನೆಯವರ ನಿರ್ಧಾರದ ಮೇಲೆ ಎಲಿಮಿನೇಟ್ ಮಾಡಿರುವುದು ಹಲವರಿಗೆ ಅಸಮಾಧಾನ ತಂದಿದೆ. ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಟ್ವಿಸ್ಟ್ಗಳಿಂದ ಕೂಡಿರುವ ಹಿನ್ನೆಲೆ ರಕ್ಷಿತಾ ಇನ್ನೂ ಮನೆಯಿಂದ ಹೊರಹೋಗಿಲ್ಲ. ಅವರನ್ನು ಅಧಿಕೃತವಾಗಿ ಎಲಿಮಿನೇಟ್ ಮಾಡಿಲ್ಲ. ಸುಮ್ಮನೆ ಪ್ರ್ಯಾಂಕ್ ಮಾಡಲಾಗುತ್ತಿದೆ. ಈ ವಾರದ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಅವರು ರೀ-ಎಂಟ್ರಿ ಕೊಡಬಹುದು ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಈ ಮಧ್ಯೆ, ರಕ್ಷಿತಾ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಸ್ವತಃ ಕಲರ್ಸ್ ಕನ್ನಡ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದರೆ, ಅವರು ವಾಪಾಸ್ ಬರುವುದು ಬಹುತೇಕ ಅನುಮಾನ ಎಂಬುದು ಖಚಿತ.