ನ್ಯೂಸ್

ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಾಗಲಿ

ಎ. ಆರ್. ರಘುರಾಮ

ಬನ್ನೂರು: ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಾಗಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವುದು ಬಹಳ ಸಂತಸ ಉಂಟು ಮಾಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಗಳು ಹೊರಬರಲು ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಕನ್ನಡ ನಾಡಿನ ಪರಂಪರೆ ವೈಭವಯುತವಾದದ್ದು ಎಂದರು.
2,000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಇಂದು ಉಳಿಸಿ ಬೆಳೆಸಿ ಎಂದು ಹೇಳುವ ಸ್ಥಿತಿ ಎದುರಾಗಿರುವುದು ಬೇಸರದ ವಿಷಯ ಎಂದರು. ಕನ್ನಡ ಮಾತೃಭಾಷೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಕನ್ನಡ ಕನಸಿನ ಭಾಷೆಯಾಗಿ ಜನಜೀವನಕ್ಕೆ ಉಸಿರಾಗಬೇಕೆಂದು ತಿಳಿಸಿದರು.