ನ್ಯೂಸ್

ಕತಾರ್​​ನಲ್ಲೂ ಅದ್ಧೂರಿ ಕನ್ನಡ ರಾಜ್ಯೋತ್ಸವ; ಸಾವಿರಕ್ಕೂ ಅಧಿಕ ಕನ್ನಡಾಭಿಮಾನಿಗಳು ಭಾಗಿ..

ಕತಾರ್: ಕನ್ನಡ ರಾಜ್ಯೋತ್ಸವ ಕರ್ನಾಟಕದಲ್ಲಿ ಮಾತ್ರವಲ್ಲ, ನಾಡಿನಾಚೆಗೂ ಆಚರಣೆಗೊಂಡಿದೆ. ಅಂದರೆ ದೂರದ ಕತಾರ್​ನಲ್ಲೂ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದೆ. 67ನೇ ಕನ್ನಡ ರಾಜ್ಯೋತ್ಸವವನ್ನು ನ. 4ರಂದು ದೋಹಾದ ಡಿಪಿಎಸ್​ ಶಾಲೆಯಲ್ಲಿ ಆಚರಣೆ ಮಾಡಲಾಗಿದ್ದು, ಇದರಲ್ಲಿ ಸಾವಿರಕ್ಕೂ ಅಧಿಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ಕರ್ನಾಟಕ ಸಂಘ ಕತಾರ್​ ಹಾಗೂ ಅದರ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್​ಗಳಿಂದ ಆಯೋಜಿಸಲಾದ ಈ ರಾಜ್ಯೋತ್ಸವ ಕನ್ನಡ ದಿಂಡಿಮವ ಗಾನ ಮತ್ತು ಕರ್ನಾಟಕ ಸಂಘ ಕತಾರ್​ ಅಧ್ಯಕ್ಷ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾಯಿತು. ರಾಜ ಮನೆತನ, ದೇಶಪ್ರೇಮ ಹಾಗೂ ಅಪ್ಪು ಸ್ಮರಣಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.

ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಆನ್​ಲೈನ್​​ಗೆ ಸೀಮಿತವಾಗಿದ್ದ ಕಾರ್ಯಕ್ರಮಗಳು ಈ ವರ್ಷ ಎಲ್ಲರ ಸಮ್ಮುಖದಲ್ಲಿ ಆಚರಿಸುತ್ತಿರುವುದಕ್ಕೆ ಮಹೇಶ್ ಗೌಡ ಸಂತಸ ವ್ಯಕ್ತಪಡಿಸಿದರು. ಕತಾರ್​ನಲ್ಲಿ ಪ್ರಪಂಚದ ಅತಿ ಪ್ರತಿಷ್ಠಿತ ಪಂದ್ಯಾವಳಿ ಫಿಫಾ ನಡೆಯುತ್ತಿರುವ ಸಂದರ್ಭದಲ್ಲಿ ಸಂಘವು ರಾಜ್ಯೋತ್ಸವ ಆಚರಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕನ್ನಡಪ್ರಭ-ಸುವರ್ಣ ನ್ಯೂಸ್​ ಮುಖ್ಯಸ್ಥ ರವಿ ಹೆಗಡೆ, ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ, ಮಿಮಿಕ್ರಿ ಕಲಾವಿದ ಯೋಗಿ ಗೌಡ, ಭಾರತ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನಾ ಪ್ರೇಮಲತಾ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಈ ಡೊಳ್ಳು ಕುಣಿತವನ್ನು ಸುಮಾ ಮಹೇಶ್ ಗೌಡ ಸಂಯೋಜಿಸಿದ್ದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ನಾಗಾಭರಣ ಅವರಿಂದಲೂ ಮೆಚ್ಚುಗೆ ಪಡೆಯಿತು.

ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನಾ ಪ್ರೇಮಲತಾ ಅವರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಕರ್ನಾಟಕ ಸಂಘ ಕತಾರ್​ನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿ, ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ಸಂಘ ಕತಾರ್ ನಡೆಸುತ್ತಿರುವ ಕನ್ನಡ ಶಾಲೆಯ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಟಿ.ಎಸ್​.ನಾಗಾಭರಣ, ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೆಡೆಸುತ್ತಿರುವ ಅಭಿಯಾನಗಳ ಬಗ್ಗೆಯೂ ತಿಳಿಸಿದರು. ಟಿ.ಎಸ್.ನಾಗಾಭರಣ ಅವರಿಗೆ 'ಕತಾರ್ ಕನ್ನಡ ಸಮ್ಮಾನ್' ಪ್ರಶಸ್ತಿ ಪ್ರದಾನ ಮಾಡಿ, ಗೌರವಾದರಗಳೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ತಂತ್ರಜ್ಞಾನದ ಉಪಯೋಗದಿಂದ ಭಾಷಾ ಬೆಳವಣಿಗೆ ಹೇಗೆ ಸಾಧ್ಯ ಎಂಬುದನ್ನು ಹಿರಿಯ ಪತ್ರಕರ್ತ ರವಿ ಹೆಗಡೆ ತಿಳಿಸಿದರು. ಚಿತ್ರ ನಟರು, ರಾಜಕೀಯ ವ್ಯಕ್ತಿಗಳು ಹಾಗೂ ಪತ್ರಿಕಾ ಮಾಧ್ಯಮದ ದಿಗ್ಗಜರ ಕುರಿತು ಯೋಗಿ ಗೌಡ ನಡೆಸಿಕೊಟ್ಟ ಮಿಮಿಕ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಸಂಘದ ಸದಸ್ಯರು ಅನೂಪ್ ಭಂಡಾರಿ ಹಾಗೂ ಟಿ.ಎಸ್.ನಾಗಾಭರಣ ಅವರ ಹಾಡುಗಳ ನೃತ್ಯ ಪ್ರದರ್ಶನ ಮಾಡಿದರು. ಕನ್ನಡ ಉಳಿಸಿ ಬೆಳೆಸಿ ಎಂಬ ನೀತಿ ಕಥೆಯ ನಾಟಕ ಪ್ರದರ್ಶನ ಮಾಡಿದರು. ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಸಂಜನಾ ಜೀವನ್ ಸಂಯೋಜಿಸಿದ 'ಕಾಂತಾರ' ಚಿತ್ರದ ವರಾಹ ರೂಪಂ ನೃತ್ಯವು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಶೀಲ ಸುನಿಲ್ ವಂದನಾರ್ಪಣೆ ಸಲ್ಲಿಸಿದರು.