ಪಂಚರಾಜ್ಯ ಫಲಿತಾಂಶದ ಬಳಿಕ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಬದಲಾಗಿದೆ. ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಎಎಪಿ ಬಲ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್, ಎಸ್ಪಿ ಇನ್ನಿತರ ಪಕ್ಷಗಳ ಸಂಖ್ಯಾಬಲ ಕುಗ್ಗಲಿದೆ. ಆದರೆ ಬಿಜೆಪಿ ರಾಜ್ಯಸಭೆಯಲ್ಲಿ ಬಹುಮತ ಗಳಿಸಲು ಇನ್ನೂ ಮೂರು ವರ್ಷ ಕಾಯಬೇಕಿದೆ. ಜುಲೈ 31ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬದಲಾದ ಸನ್ನಿವೇಶದಲ್ಲಿ ರಾಜಕೀಯ ಶಕ್ತಿಯ ಲೆಕ್ಕಾಚಾರ ವೇಗ ಪಡೆದುಕೊಂಡಿದೆ. ಈ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಆಮ್ ಆದ್ಮಿ ಪಕ್ಷಕ್ಕೆ ಇನ್ನಷ್ಟು ಬಲ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ಬಳಿಕ ಆಮ್ ಆದ್ಮಿ ಪಕ್ಷ ರಾಜ್ಯಸಭೆಯಲ್ಲೂ ಬಲ ಹೆಚ್ಚಿಸಿಕೊಳ್ಳಲಿದೆ. ಜುಲೈನಲ್ಲಿ ಪಂಜಾಬ್ನಿಂದ 7 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 6 ಸ್ಥಾನಗಳನ್ನು ಎಎಪಿ ನಿರಾಯಾಸವಾಗಿ ಪಡೆಯಲಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ 5ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸರ್ಕಾರಕ್ಕೆ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಎಎಪಿ ಬೆಂಬಲ ಅಗತ್ಯವಾಗಲಿದೆ. ಪ್ರಸ್ತುತ ದೆಹಲಿಯ ಮೂರು ರಾಜ್ಯಸಭೆ ಸ್ಥಾನಗಳನ್ನು ಆಪ್ ಹೊಂದಿದೆ.
- ಶಿರೋಮಣಿ ಅಕಾಲಿದಳ ತನ್ನ ಬಳಿಯಿದ್ದ ಮೂರೂ ಸ್ಥಾನಗಳನ್ನು ಕಳೆದುಕೊಳ್ಳಲಿದೆ.
- ಬಿಎಸ್ಪಿ 3 ಸ್ಥಾನದಿಂದ ಒಂದು ಸ್ಥಾನಕ್ಕೆ ಇಳಿಯಲಿದೆ.
- ಕಾಂಗ್ರೆಸ್ ಬಲ 34ರಿಂದ 26ಕ್ಕೆ ಕುಸಿಯಲಿದೆ.
- ಬಿಜೆಪಿ ತನ್ನ ಬಹುತೇಕ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ.
ಬಿಜೆಪಿಗೆ ಬಹುಮತ ಕಷ್ಟ: ಬಿಜೆಪಿ ತನ್ನ ಬಳಿಯಿದ್ದ ಬಹುತೇಕ ರಾಜ್ಯಸಭೆ ಸ್ಥಾನಗಳನ್ನು ಉಳಿಸಿಕೊಂಡರೂ, ರಾಜ್ಯಸಭೆಯಲ್ಲಿ ಪೂರ್ಣ ಬಹುಮತ ಪಡೆದಿಲ್ಲ. ಇದಕ್ಕಾಗಿ 2024 ಏಪ್ರಿಲ್ವರೆಗೆ ಕಾಯುವುದು ಅನಿವಾರ್ಯವಾಗಿದೆ. ಮುಂದಿನ ವರ್ಷ ಕೇವಲ 9 ಸ್ಥಾನಗಳು ತೆರವಾಗಲಿವೆ. ಇದರಿಂದ ಬಿಜೆಪಿಗೆ ಹೆಚ್ಚಿನ ಪ್ರಯೋಜನ ಆಗದು. 2024ರಲ್ಲಿ ವಿವಿಧ ರಾಜ್ಯಗಳ 54 ಸ್ಥಾನಗಳು ತೆರವಾಗಲಿವೆ. ಅಲ್ಲಿಯವರೆಗೂ ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯಲು ಯುಪಿಎ ಹೊರತಾದ ಪಕ್ಷಗಳ ಅವಲಂಬನೆ ಅಗತ್ಯವಾಗಿದೆ.
ನಾಮನಿರ್ದೇಶಿತರ ಪಾತ್ರ: ಹಾಲಿ ರಾಜ್ಯಸಭೆಯ 12 ನಾಮನಿರ್ದೇಶಿತರಲ್ಲಿ 9 ಮಂದಿ ಬಿಜೆಪಿ ಭಾಗವಾಗಿದ್ದು. ಅದರ ಒಟ್ಟು 97 ಸೀಟುಗಳಲ್ಲಿ ಇವರೂ ಸೇರಿದ್ದಾರೆ. ಮುಂದಿನ ತಿಂಗಳು ಸರ್ಕಾರ ರಾಜ್ಯಸಭೆಗೆ ಏಳು ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಿದೆ. ‘ನಾಮನಿರ್ದೇಶಿತರು ರಾಜಕೀಯ ಪಕ್ಷವನ್ನು ಸೇರಿದಲ್ಲಿ, ಮಸೂದೆಗಳ ಮೇಲಿನ ಮತದಾನ ಇತ್ಯಾದಿ ವಿಚಾರದಲ್ಲಿ ಪಕ್ಷದ ವಿಪ್ ಅನ್ನು ಪಾಲಿಸಬೇಕಾಗುತ್ತದೆ. ಆದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಅನ್ವಯವಾಗುವುದಿಲ್ಲ. ಇಂಥ ನಾಮನಿರ್ದೇಶಿತರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ’ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ.