ನ್ಯೂಸ್

ಅರವಿಂದ್​ ಕೇಜ್ರಿವಾಲ್ ಭಯೋತ್ಪಾದಕನಲ್ಲ, ದೆಹಲಿಯ ಪುತ್ರ ಎಂಬುದನ್ನು ಇಲ್ಲಿನ ಜನ ಸಾಬೀತುಪಡಿಸಿದ್ದಾರೆ...: ಆಪ್​ ಎಂಪಿ ಸಂಜಯ್​ ಸಿಂಗ್​

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಮತ್ತೊಮ್ಮೆ ಆಪ್​ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ. ಅರವಿಂದ್​ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರುತ್ತಿದ್ದಾರೆ.

ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷದ ಗೆಲುವನ್ನು ದೇಶದ ಜನರ ಗೆಲುವು ಎಂದು ಹೇಳಿದ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವಾಗಲೂ ದ್ವೇಷರಾಜಕಾರಣ ಗೆಲ್ಲುವುದಿಲ್ಲ. ಇದನ್ನು ಇನ್ನಾದರೂ ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಹೇಳಿದರು. ಆದರೆ ಇಲ್ಲಿನ ಜನರು ಅದನ್ನು ಸುಳ್ಳಾಗಿಸಿದ್ದಾರೆ. ತಮ್ಮ ಮನೆ ಮಗ ಎಂದು ಭಾವಿಸಿ ಮತ ಹಾಕಿ, ಭರ್ಜರಿ ಗೆಲುವು ಕೊಟ್ಟಿದ್ದಾರೆ ಎಂದು ಆಪ್​ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್​ ಹೇಳಿದರು.

ಬಿಜೆಪಿ ನಾಯಕರು ಚುನಾವಣೆ ಪ್ರಚಾರದ ವೇಳೆ ಏನೇ ಬಲ ಪ್ರಯೋಗ ಮಾಡಿದರೂ ಕೊನೆಗೂ ಗೆದ್ದಿದ್ದು ದೆಹಲಿಯ ಪುತ್ರ. ಇಲ್ಲಿನ ಜನರು ಅಭಿವೃದ್ಧಿ ಹಾಗೂ ಬೆಳವಣಿಗೆಯ ಪರ ಮತ ಹಾಕಿದ್ದಾರೆ ಎಂಬುದು ಅಮಿತ್​ ಷಾ ಅವರಿಗೆ ಈಗ ಅರ್ಥವಾಗಿದೆ ಎಂದರು.

ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಸಂಸದ ಪರ್ವೇಶ್​ ವರ್ಮಾ ಅವರು ಅರವಿಂದ್ ಕೇಜ್ರಿವಾಲ್​ ಭಯೋತ್ಪಾದಕ ಎಂದು ಹೇಳಿದ್ದರು.(ಏಜೆನ್ಸೀಸ್)