ನ್ಯೂಸ್

ರಾಜ್ಯಸಭೆಗೆ ಕೆ.ನಾರಾಯಣ್​ ಅವಿರೋಧ ಆಯ್ಕೆ

arunakunigal

ಬೆಂಗಳೂರು: ಅಶೋಕ್​ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿಯ ಡಾ. ಕೆ.ನಾರಾಯಣ್ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟಿದ್ದರು. ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿಸೆಂಬರ್ 1ರಂದು ಮತದಾನದ ದಿನಾಂಕವನ್ನೂ ಘೋಷಣೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಉದ್ಯಮಿ ನಾರಾಯಣ್ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಕೆ.ನಾರಾಯಣ್​ ಅವರ ಆಯ್ಕೆಯನ್ನು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಪ್ರಕಟಿಸಿದರು. ವಿಧಾನಸಭೆಯಲ್ಲಿ ಸದಸ್ಯ ಬಲದ ಕೊರತೆಯಿಂದ ಕಾಂಗ್ರೆಸ್​ ಮತ್ತು ಜೆಡಿಎಸ್​ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ನಾರಾಯಣ್​ ಅವಿರೋಧ ಆಯ್ಕೆಯಾದರು.

ನಾಮಪತ್ರ ಹಿಂಪಡೆಯುವ ಅವಧಿ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿಗಳ ಕಚೇರಿಗೆ ಕುಟುಂಬ ಸಮೇತ ಆಗಮಿಸಿದ ನಾರಾಯಣ್​, ವಿಧಾನಸಭೆ ಕಾರ್ಯದರ್ಶಿಗಳಿಂದ ಆಯ್ಕೆಯ ಪ್ರಮಾಣಪತ್ರ ಸ್ವೀಕರಿಸಿದರು.