ಬೆಂಗಳೂರು: ಬಿಜೆಪಿಯವರಿಗೆ ಸತ್ಯ ಹೇಳುವ ತಾಕತ್ತು, ದಮ್ಮು ಇಲ್ಲ. ಸುಳ್ಳು ಹೇಳಿ , ಚೀರಾಡಿ ದಣಿಯುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ವ್ಯಂಗ್ಯವಾಡಿದರು.
ನವದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಖಂಡಿಸಿ ಬಿಜೆಪಿ ಪೋಸ್ಟರ್ ಅಭಿಯಾನ ಮಾಡಲಿ, ಯಾವ ಚಳುವಳಿಯನ್ನಾದರೂ ಮಾಡಲಿ. ಬಟ್ಟೆಯನ್ನಾದರೂ ಹರಿದು ಕೊಳ್ಳಲಿ. ದಾಖಲೆ ಇಟ್ಟುಕೊಂಡು ಮಾತನಾಡಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಬಿಜೆಪಿ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದಾಗ ಕ್ಯೂ ಆರ್ ಕೋಡ್ ಅಳವಡಿಸಿದ್ದರು. ಅದನ್ನು ಸ್ಕಾೃನ್ ಮಾಡಿದರೆ ಒಂದು ರೇಟ್ ಕಾರ್ಡ್ ತೆರೆದುಕೊಳ್ಳುತ್ತಿತ್ತು. ನಾವು ಅದನ್ನು ಪ್ರಚಾರ ಮಾಡಿದ್ದೆವು. ಆದರೆ ಈಗ ಬಿಜೆಪಿಯವರು ಲಾಜಿಕ್ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಹೆಸರು ಜಪ ಮಾಡಿದರೆ ಜನ ನಂಬುತ್ತಾರಾ? ಅವರ ಸಿದ್ಧಾಂತ, ನಮ್ಮ ಸಿದ್ಧಾಂತ ಬೇರೆ. ಅವರದ್ದು ಆರ್‌ಎಸ್‌ಎಸ್, ಮನು ಸಿದ್ಧಾಂತ. ಅದಕ್ಕೆ ನಾನು ಮೊದಲಿನಿಂದಲೂ ವಿರೋಧ. ಮಲ್ಲಿಕಾರ್ಜುನ ಖರ್ಗೆ ಅವರೂ ವಿರೋಧ ಮಾಡುತ್ತ ಬಂದಿದ್ದಾರೆ. ಅದಕ್ಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಗುತ್ತಿಗೆದಾರನ ಆತ್ಮಹತ್ಯೆಯಲ್ಲಿ ನನ್ನ ಪಾತ್ರ ಇದೆ ಎಂದು ಹೇಳುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಸಿಕ್ಕಿಕೊಂಡಾಗ ಅಶೋಕ್ ಹೆಸರು ಥಳುಕು ಹಾಕಿಕೊಂಡಿತ್ತು. ಯಡಿಯೂರಪ್ಪ ಕೇಸ್ ಏನಾಯ್ತು? ಸ್ಯಾಂಟ್ರೋ ರವಿ, ಸುನೀಲ್ ಯಾರು? ಎಂದು ಕೆಣಕಿದರು.
ಕಲಬುರಗಿಯಲ್ಲಿ ತಮ್ಮ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಯವರು ಬರುತ್ತಾರಂತೆ. ಧಾರಾಳವಾಗಿ ಬನ್ನಿ. ಎಳನೀರು, ಕಾಫಿ-ಟೀ ಎಲ್ಲವನ್ನೂ ಕೊಡುತ್ತೇವೆ. ಚೀರಾಡಿ ಕೂಗಾಡಿ ದಣಿದಿರುತ್ತಾರೆ. ಅವರ ಯೋಗಕ್ಷೇಮ ನಮ್ಮ ಜವಾಬ್ದಾರಿ ಎಂದು ಟಾಂಗ್ ಕೊಟ್ಟರು. ಗುತ್ತಿಗೆದಾರನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರ ಕುಟುಂಬ ಹೇಳಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರೇ, ನಿಮ್ಮದೇ ಪಕ್ಷದ ಅಭ್ಯರ್ಥಿಗಳು ಯಾರು, ನಿಮ್ಮದೇ ಪಕ್ಷದ ಶಾಸಕರು ಯಾರು, ನಿಮ್ಮದೇ ಪಕ್ಷದ ಮುಖಂಡರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುವುದಾದರೆ ಈ ಫೋಟೋಗಳಲ್ಲಿ ಇರುವ ನಿಮ್ಮವರನ್ನು ಗುರುತಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆಫೋಟೊ/ವಿಡಿಯೋ ಬಿಡುಗಡೆ ಮಾಡಿ ಸವಾಲು ಹಾಕಿದ್ದಾರೆ.
ಅಂದಹಾಗೆ, ಈ ವಿಡಿಯೋ, ಫೋಟೋಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ?
ಹಲವು ಬಿಜೆಪಿ ಮುಖಂಡರು, ಶಾಸಕರು ರಾಜು ಕಪನೂರಗೆ ಪರಮಾಪ್ತರಿದ್ದಾರೆ. ಅವರ ರಾಜೀನಾಮೆಯನ್ನು ಯಾವಾಗ ಕೇಳುವಿರಿ ಬಿಜೆಪಿ ಕರ್ನಾಟಕ? ಮುತ್ತಿಗೆ ಹಾಕಲು ಬರುವಾಗ ವಿಜಯೇಂದ್ರರವರು ತಮ್ಮ ಪಕ್ಷದ ಯಾವ ಯಾವ ಶಾಸಕರು ರಾಜು ಕೂಪನೂರ ಜೊತೆಗೆ ಆಪ್ತರಾಗಿದ್ದಾರೆ ಎನ್ನುವ ಬಗ್ಗೆ ಹೋಮ್ ವರ್ಕ್ ಮಾಡಿಕೊಂಡು ಬರುವುದು ಉತ್ತಮ. ಮುತ್ತಿಗೆಗೆ ಬರುವಾಗ ಈ ಎಲ್ಲ ಫೋಟೋಗಳನ್ನೂ ಹಿಡಿದು ಬರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ದೆಹಲಿಗೆ ಖಾಸಗಿ ಕೆಲಸದ ನಿಮಿತ್ತ ಹೋಗುತ್ತಿದ್ದೇನೆ. ಹೈಕಮಾಂಡ್ ನಾಯಕರ ಭೇಟಿಗೆ ಅಲ್ಲ. ಸಿಎಂ, ಡಿಸಿಎಂ ಜೊತೆ ಮಾತನಾಡಿದ್ದೇನೆ. ಹೈಕಮಾಂಡ್ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ.
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ.