ನ್ಯೂಸ್

14ಕ್ಕೆ ರಾಜು ಜೇಮ್ಸ್ ಬಾಂಡ್ ಸಿನಿಮಾ ತೆರೆಗೆ

ಶಿವಮೊಗ್ಗ: ಫಸ್ಟ್ ರ‌್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಸಿನಿಮಾ ಫೆ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಸತ್ಯ ಪಿಕ್ಚರ್ಸ್‌ ಮೂಲಕ ರಾಜ್ಯಾದ್ಯಂತ 200ಕ್ಕೂ ಅಧಿಕ ಟಾಕೀಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಹುಬ್ಬಳ್ಳಿಯ ಮೃದುಲಾ ನಾಯಕಿಯಾಗಿದ್ದು, ಲಂಡನ್‌ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದು ನಾಯಕ ಗುರುನಂದನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಯಕಿ ಮೃದುಲಾ ಪಟ್ಟಣಶೆಟ್ಟಿ ಮಾತನಾಡಿ, ನಾನು ಮೂಲತಃ ಹುಬ್ಬಳ್ಳಿಯ ಹುಡುಗಿ. ಇದು ನನ್ನ ಮೊದಲ ಸಿನಿಮಾ. ನನ್ನದು ಟೀಚರ್ ಪಾತ್ರ. ಚಿತ್ರದಲ್ಲಿ ನಾಯಕನಿಗೆ ಬದುಕಿನ ಪಾಠ ಹೇಳಿಕೊಟ್ಟಿದ್ದೇನೆ ಎಂದರು.

ನಿರ್ಮಾಪಕ ಕಿರಣ್ ಬರ್ತೂರು ಮಾತನಾಡಿ, ಹಳ್ಳಿಯ ಹುಡುಗ ರಾಜು, ಓದಿ ವಿದ್ಯಾವಂತನಾಗಿ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಡುತ್ತಾನೆ. ಹಾಗಂತ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುವುದು ಆತ ಅಂದುಕೊಂಡಷ್ಟು ಸುಲಭವಾಗಿರಲ್ಲ. ಆತನ ಮುಂದೆ ಹಲವಾರು ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ. ಆತ ಅದನ್ನೆಲ್ಲ ಹೇಗೆ ನಿಭಾಯಿಸಿ, ಹಳ್ಳಿ ಜನರ ಪಾಲಿಗೆ ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ ಎಂದರು.

ರವಿಶಂಕರ್, ಸಾಧು ಕೋಕಿಲ, ಅಚ್ಯುತ್‌ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂದರು. ನಿರ್ಮಾಪಕ ಮಂಜುನಾಥ್ ವಿಶ್ವಕರ್ಮ, ಎಂ.ಎಲ್.ಕೆ.ನಾಯ್ಡು, ದರ್ಶನ್ ಸುದ್ದಿಗೋಷ್ಠಿಯಲ್ಲಿದ್ದರು.