ನ್ಯೂಸ್

ಯೋಗೇಶ್ವರ್​ ಆಸ್ತಿಯನ್ನು ನಾವ್ ತಗೊಂಡಿಲ್ಲ... ಅವರ ಮೇಲೆ ದ್ವೇಷವೂ ಇಲ್ಲ ಎನ್ನುತ್ತಲೇ ಸಿಡಿದೆದ್ದ ಬಿಜೆಪಿ ಶಾಸಕ

arunakunigal

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಸಚಿವ ಸ್ಥಾನಕ್ಕೆ ಹಲವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಶೀಘ್ರವೇ ಮಂತ್ರಿಯನ್ನಾಗಿ ಮಾಡಿ ಎಂದು ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಈ ನಡುವೆ ಅವರಿಗೆ ಮನ್ನಣೆ ನೀಡಿ, ಇವರಿಗೆ ಕೊಡಬೇಡಿ ಎಂಬ ಒತ್ತಡವೂ ಸಿಎಂ ಮೇಲಿದೆ. ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್​ ವಿಚಾರದಲ್ಲೂ ಇದು ಮರುಕಳಿಸಿದೆ.

ಯೋಗೇಶ್ವರ್​ರನ್ನು ಸಚಿವರನ್ನಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಶಾಸಕ ರಾಜುಗೌಡ, 'ಯೋಗೇಶ್ವರ್​ರ ಆಸ್ತಿಯನ್ನು ನಾವ್ ತಗೊಂಡಿಲ್ಲ. ನಮ್ ಆಸ್ತಿಯನ್ನು ಯೋಗೇಶ್ವರ್ ತಗೊಂಡಿಲ್ಲ. ಯೋಗೇಶ್ವರ್ ಮೇಲೆ ನಮಗೆ ದ್ವೇಷವೂ ಇಲ್ಲ. ಆದ್ರೆ ಸೋತವರಿಗೆ ಸಚಿವ ಸ್ಥಾನ ಕೊಡೋದು ಬೇಡ ಅಂತ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

ಶನಿವಾರ ರಮೇಶ್​ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ನಿವಾಸದಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಸೋತವರ ಬದಲು ಶಾಸಕರಿಗೆ ಸಚಿವ ಸ್ಥಾನ ಕೊಡಿ ಅಂದಿದ್ದೇವೆ. ಎಂಟಿಬಿ, ವಿಶ್ವನಾಥ್, ಶಂಕರ್ ಅವರು ಪಕ್ಷಕ್ಕೆ ತ್ಯಾಗ ಮಾಡಿ ಬಂದವರು. ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದ್ರೆ ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದರು.

ಯೋಗೇಶ್ವರ್​ರನ್ನು ಮಂತ್ರಿ ಮಾಡೇ ಮಾಡ್ತೀವಿ ಅಂದ್ರೆ ಮಾಡಲಿ. ಹೈಕಮಾಂಡ್ ಮತ್ತು ಸಿಎಂ ನಿರ್ಧಾರಕ್ಕೆ ನಾವು ಬದ್ಧ. ಆದ್ರೆ ಸೋತವರ ಬದಲು ಗೆದ್ದವರಿಗೆ ಅವಕಾಶ ಕೊಟ್ಟರೆ ಉತ್ತಮ ಎಂದರು.

ರಾಜುಗೌಡ ವಿರೋಧದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು.