ನ್ಯೂಸ್

ರಷ್ಯಾದಲ್ಲಿ ರಾಜನಾಥ್​ ಸಿಂಗ್​: ಶೇಕ್​ ಹ್ಯಾಂಡ್​ ಮಾಡಲು ಬಂದ ಅಧಿಕಾರಿಗೆ ಕೈ ಜೋಡಿಸಿ ಟ್ರೆಂಡ್ ಆದರು..!

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಮೂರು ದಿನಗಳ ರಷ್ಯಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಶಾಂಘೈ ಕೋ-ಆಪರೇಶನ್ ಆರ್ಗನೈಸೇಶನ್​ನ ಸಭೆಯಲ್ಲಿ ಪಾಲ್ಗೊಳ್ಳಲು ಮಾಸ್ಕೋಕ್ಕೆ ತೆರಳಿರುವ ಅವರು, ರಷ್ಯಾದ ರಕ್ಷಣಾ ಸಚಿವ ಸರ್ಜೆ ಶೋಯ್ಗು ಅವರೊಂದಿಗೆ ಪ್ರಮುಖ ವಿಚಾರಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈಗಾಗಲೇ ರಷ್ಯಾವನ್ನು ತಲುಪಿರುವ ರಾಜನಾಥ್ ಸಿಂಗ್​ ಅವರು ಅಲ್ಲಿನ ಏರ್​​ಪೋರ್ಟ್​​ನಲ್ಲಿ ತಮ್ಮನ್ನು ಸ್ವಾಗತಿಸಲು ಬಂದ ಅಧಿಕಾರಿಗಳು, ಪ್ರಮುಖರಿಗೆ ಕೈಮುಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ನೆಟ್ಟಿಗರು ರಕ್ಷಣಾ ಸಚಿವರ ಈ ನಡೆಯಿಂದ ಫುಲ್​ ಖುಷಿಯಾಗಿದ್ದಾರೆ.

ಕರೊನಾಕ್ಕೂ ಮೊದಲು ಶೇಕ್​ ಹ್ಯಾಂಡ್​ ಪದ್ಧತಿ ಇತ್ತು. ಆದರೆ ಕರೊನಾ ಬಂದ ನಂತರ ಭಾರತೀಯ ನಮಸ್ತೆ ಪದ್ಧತಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ರಷ್ಯಾ ಕೂಡ ಇದನ್ನು ಸ್ವಾಗತಿಸಿತ್ತು.

ರಾಜನಾಥ್​ ಸಿಂಗ್​ ಅವರನ್ನು ವಿಮಾನ ನಿಲ್ದಾಣದಲ್ಲಿ ಮೇಜರ್​ ಜನರಲ್​ ಬುಕ್ತೀವ್ ಯುರಿ ನಿಕೋಲೆವಿಚ್ ಅವರು ಸ್ವಾಗತಿಸಿದರು. ಅವರಿಗೂ ಸಹ ಸಚಿವರು ನಮಸ್ತೆ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಬುಕ್ತೀವ್​ ಕೂಡ ಕೈಮುಗಿದಿದ್ದಾರೆ.

ಹಾಗೇ ಮುಂದೆ ಬಂದಾಗ ರಕ್ಷಣಾ ಅಧಿಕಾರಿಯೋರ್ವರು ರಾಜನಾಥ್ ಸಿಂಗ್ ಅವರಿಗೆ ಶೇಕ್​ ಹ್ಯಾಂಡ್ ಮಾಡಲು ಬರುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ಶೇಕ್​ ಹ್ಯಾಂಡ್ ಮಾಡದೆ, ಮತ್ತೆ ಎರಡೂ ಕೈ ಜೋಡಿಸಿ ನಮಸ್ತೆ ಎನ್ನುತ್ತಾರೆ. ಆಗ ಅಧಿಕಾರಿಯೂ ಸಚಿವರಿಗೆ ಕೈಮುಗಿಯುತ್ತಾರೆ. ಹಾಗೇ ತಮಗೆ ಪರಿಚಯಿಸಿಕೊಡಲಾದ ಎಲ್ಲ ಅಧಿಕಾರಿಗಳಿಗೂ ಅವರು ಕೈಮುಗಿಯುತ್ತಲೇ ಹೋಗಿದ್ದಾರೆ. ಈ ವಿಡಿಯೋವನ್ನು ರಾಜನಾಥ್​ ಸಿಂಗ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಕೊವಿಡ್​-19 ಇರುವ ಸಂದರ್ಭದಲ್ಲಿ ಬದ್ಧತೆ ಮೆರೆದ ರಾಜನಾಥ್​ ಸಿಂಗ್ ಅವರನ್ನು ಭಾರತೀಯರು ತುಂಬ ಹೊಗಳುತ್ತಿದ್ದಾರೆ. (ಏಜೆನ್ಸೀಸ್​)