ನವದೆಹಲಿ: ಚೀನಾ,ಪಾಕಿಸ್ತಾನದೊಂದಿಗೆ ಗಡಿ ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಮೂರು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅವರು ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ (ಎಸ್ಸಿಒ)ನ ಮಹತ್ವದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ರಷ್ಯಾದ ರಕ್ಷಣಾ ಸಚಿವ ಸರ್ಜೆ ಶೊಯ್ಗು ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದ ಮಾತುಕತೆ ನಡೆಸಲಿದ್ದಾರೆ.
ಎಸ್ಸಿಒ ಸದಸ್ಯರಾಷ್ಟ್ರಗಳಾದ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಸಭೆಯಲ್ಲಿ ಭಾಗಿಯಾಗಲಿದ್ದು, ಭಯೋತ್ಪಾದನೆ ಮತ್ತು ಇತರೆ ಸವಾಲುಗಳನ್ನು ಎದುರಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್ ವೇಯ್ ಫೆನ್ಘೆ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಕೂಡ ಭಾಗವಹಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಯುಎನ್ಎಸ್ಸಿಯಲ್ಲಿ ಜಮ್ಮು-ಕಾಶ್ಮೀರದ ವಿಚಾರ ಔಟ್ಡೇಟ್
ಚೀನಾ ರಕ್ಷಣಾ ಸಚಿವರೊಂದಿಗೆ ಈ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಈ ನಡುವೆ, ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ಎಸ್ಸಿಒ ಸಭೆಗೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)