ಬೆಂಗಳೂರು: ಮಹಿಳೆಯರು ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಳ್ಳಬೇಕು. ಮೊದಲ ಬಾರಿಗೆ ಮಹಿಳಾ ಮೀಸಲಾತಿ ಪರವಾಗಿ ಮಾತನಾಡಿದವರು ಅವರು. ಮಹಿಳೆಯರು ರಾಜಕಾರಣಕ್ಕೆ ಬರಬೇಕು ಎಂದು ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ತಂದರು. ದೇಶದಲ್ಲಿ 16 ಲಕ್ಷಕ್ಕೂ ಹೆಚ್ಚು ಮಹಿಳೆಯರು ರಾಜಕೀಯದಲ್ಲಿ ಇರಲು ಇವರೇ ಕಾರಣ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸೌಮ್ಯಾ ರೆಡ್ಡಿ ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಭಾರತ ಪುರಾತನ ದೇಶ ಆದರೆ ಯುವಶಕ್ತಿಯಿಂದ ತುಂಬಿದೆ. ನನಗೆ ಈ ದೇಶ ನಿರ್ಮಾಣದ ಬಗ್ಗೆ ನನ್ನದೇ ಆದ ಕನಸುಗಳಿವೆ. ನನ್ನ ದೇಶ ಸ್ವಾವಲಂಭಿಯಾಗಬೇಕು ಎಂಬುದು ನನ್ನ ಕನಸು ಎಂದಿದ್ದರು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ ಎಂದರು.
ಸಿದ್ದರಾಮಯ್ಯ ಅವರು ಇದೇ ಹಾದಿಯಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ನಾವೆಲ್ಲಾ ಪ್ರತಿ ಮನೆಗೂ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಬೇಕು ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ಅವರು ತೀರಿ ಹೋದಾಗ ಎಂಟು ವರ್ಷದ ಬಾಲಕಿ. ನನ್ನ ತಂದೆ ಮೊದಲ ಬಾರಿಗೆ ಗೆದ್ದು ಸಚಿವರಾಗಿದ್ದರು. ಅವರ ಬಗ್ಗೆ ಶ್ರದ್ದಾಂಜಲಿ ಎನ್ನುವ ಕ್ಯಾಸೆಟ್ ಬಂದಿತ್ತು ಅದನ್ನು ಸದಾ ಕೇಳುತ್ತಿದ್ದೆ. ರಾಜೀವ್ ಗಾಂಧಿ ಅವರು ಪ್ರಧಾನಿ ಆದಾಗ ಕೇವಲ 40 ವರ್ಷ. ಅವರೇ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರು.