ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ತಮಿಳುನಾಡಿನ ಪೆರಂಬದೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ಸದ್ಭಾವನಾ ಜ್ಯೋತಿ ಯಾತ್ರೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಯುವಕರಿಗೆ ಸ್ಪೂರ್ತಿ ಕೊಟ್ಟಂತಹ ಅಪರೂಪದ ರಾಜಕಾರಣಿ. ಅವರು ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಮೂಲಕ ಅವರು ಅಂತರರಾಷ್ಟ್ರೀಯ ಜಗತ್ತಿನಲ್ಲಿ ಭಾರತಕ್ಕೆ ತಂದ ಮನ್ನಣೆ ಮತ್ತು ಸ್ಥಾನಮಾನವನ್ನು ನೆನಪಿಸಬೇಕಿದೆ ಎಂದರು.
ಭಾರತವನ್ನು ಆಧುನಿಕ, ಸಮೃದ್ಧ ಮತ್ತು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. 18 ವಯಸ್ಸಿನವರಿಗೆ ಮತದಾನದ ಹಕ್ಕು ನೀಡಿ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಮ್ಯೂನಿಕೇಷನ್ ನಲ್ಲಿ ಕ್ರಾಂತಿ ಮಾಡಿದ್ದ ಅವರು ಯುವ ಜನತೆಗೆ ಆದರ್ಶವಾಗಿದ್ದಾರೆ. ಎಂದು ಹೇಳಿದರು.
ರಾಹುಲ್ ಗಾಂಧಿ ಇಂದು ದೇಶದಲ್ಲಿ ಭ್ರಷ್ಟಾಚಾರ, ಅನ್ಯಾಯ, ಹಾಗೂ ದ್ವೇಷ ರಾಜಕಾರಣದ ವಿರುದ್ಧ ಹೋರಾಟ ನಡೆಸುತ್ತಾ ಪ್ರೀತಿಯ, ಸೌಹಾರ್ದತೆಯ ಸಮಾಜವನ್ನು ಕಟ್ಟುವ ಉದ್ದೇಶದೊಂದಿಗೆ ರಾಜೀವ್ ಗಾಂಧಿ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸೀಟ್ ಗೆಲ್ಲಿಸುವ ಮೂಲಕ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ, ಇಂಟಕ್ ಅಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್, ಕಾರ್ಮಿಕ ಘಟಕದ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ, ಸೇವಾದಳದ ಅಧ್ಯಕ್ಷ ರಾಮಚಂದ್ರ, ಸಮಿತಿಯ ದೊರೈ, ವೇಲು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.