ನ್ಯೂಸ್

ಕೊನೆಗೂ ಶ್ರೀದೇವಿ ಮೇಲಿದ್ದ ಪ್ರೀತಿಯನ್ನು ಹೇಳಲೇ ಇಲ್ಲ 'ತಲೈವಾ'; ರಜಿನಿಕಾಂತ್​ ಮನದಲ್ಲಿತ್ತು ಈ ವಿಚಾರ | Rajinikanth

Rajinikanth: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​, 'ತಲೈವಾ' ಎಂದೇ ಖ್ಯಾತಿ ಪಡೆದಿರುವ ಹಿರಿಯ ನಟ ರಜಿನಿಕಾಂತ್​​, ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ 'ಕೂಲಿ' ಚಿತ್ರದಲ್ಲಿ ಸಖತ್ ಬಿಜಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿದ್ದು, ಆ.14ರಂದು ಚಿತ್ರ ತೆರೆಗೆ ಬರಲಿದೆ. ಈ ಮಧ್ಯೆ ಹಳೆಯ ಸುದ್ದಿಯೊಂದು ಮತ್ತೇ ಮುನ್ನೆಲೆಗೆ ಬಂದಿದ್ದು, ಬಾಲಿವುಡ್​ನ ದಿವಂಗತ ನಟಿ ಶ್ರೀದೇವಿಯನ್ನು ತಲೈವಾ ಪ್ರೀತಿಸುತ್ತಿದ್ದರು ಎಂಬ ವಿಚಾರ ಸದ್ಯ ಹಲವರ ಹುಬ್ಬೇರಿಸಿದೆ.

ಅಂದಿನ ಕಾಲಘಟ್ಟದಲ್ಲಿ ಶ್ರೀದೇವಿ ಜೊತೆಗೆ ಸುಮಾರು 19ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ರಜಿನಿಕಾಂತ್​, ಬಾಲಿವುಡ್​ ಸ್ಟಾರ್​ ನಟಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆ ಕಾಲಕ್ಕೆ ಈ ಸುದ್ದಿ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಆದರೆ, ಹಳೆಯ ಸಂದರ್ಶನವೊಂದರಲ್ಲಿ ಚಿತ್ರ ನಿರ್ದೇಶಕ ಕೆ. ಬಾಲಚಂದರ್​, 'ತಲೈವಾ' ತಮ್ಮ ಮನಸ್ಸಿನಲ್ಲಿದ್ದ ವಿಷಯವನ್ನು ಹೇಳಲು ಏನು ಮಾಡಿದ್ದರು? ಹೇಳದೆ ಏಕೆ ವಾಪಾಸ್ ಆದರು ಎಂಬ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆ ವಿಷಯ ಇದೀಗ ಪುನಃ ಸುದ್ದಿಗೆ ಬಂದಿದೆ.

ಹಳೆಯ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಕೆ. ಬಾಲಚಂದರ್​, "ಅಂದು ಶ್ರೀದೇವಿ ಅವರ ಮನೆ ಗೃಹಪ್ರವೇಶವಿತ್ತು. ಈ ಕಾರ್ಯಕ್ರಮಕ್ಕೆ ರಜಿನಿಕಾಂತ್ ಕೂಡ ಭೇಟಿ ನೀಡಿದ್ದರು. ಶ್ರೀದೇವಿ ಮೇಲಿದ್ದ ಪ್ರೀತಿ ಭಾವನೆಯನ್ನು ವ್ಯಕ್ತಪಡಿಸುವುದರ ಜತೆಗೆ ಮದುವೆ ಪ್ರಸ್ತಾಪವನ್ನು ಸಹ ಮುಂದಿಡಲು ಬಯಸಿದ್ದರು. ಆದರೆ, ಅದೇ ಸಮಯದಲ್ಲಿ ನಟಿಯ ಮನೆಯಲ್ಲಿ ಕರೆಂಟ್​ ಹೋಯಿತು. ತಾನು ಮದುವೆ ಪ್ರಸ್ತಾಪ ಮುಂದಿಡುವಾಗಲೇ ಹೀಗಾಯಿತಲ್ಲಾ ಎಂದು ರಜನಿ ತಮ್ಮ ಮನದಾಳದ ಮಾತನ್ನು ಹೃದಯದಲ್ಲೇ ಇರಿಸಿಕೊಂಡರು" ಎಂದಿದ್ದಾರೆ.

"ಇದು ಅಪಶಕುನ ಎಂದು ಭಾವಿಸಿದ ರಜನಿಕಾಂತ್, ಈ ಬಗ್ಗೆ ಮಾತನಾಡದಿರಲು ನಿರ್ಧರಿಸಿದರು. ಶ್ರೀದೇವಿ ಜೊತೆಗಿನ ಮದುವೆ ಪ್ರಸ್ತಾಪವನ್ನು ಮುಂದುವರಿಸದೆ ಮನೆಯಿಂದ ಹೊರಟುಹೋದರು. ಶ್ರೀದೇವಿ ಮೇಲಿದ್ದ ಪ್ರೀತಿ ಭಾವನೆಗಳ ಹೊರತಾಗಿ, ನಟಿಯೊಂದಿಗಿದ್ದ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳಲು ರಜನಿ ಆಯ್ಕೆ ಮಾಡಿಕೊಂಡರು" ಎಂದು ಬಾಲಚಂದರ್​ ಹೇಳಿದ್ದರು,(ಏಜೆನ್ಸೀಸ್).