women hang herself 
ನ್ಯೂಸ್

ಮನಕಲಕುವ ಘಟನೆ: ತನ್ನ 4 ಮಕ್ಕಳನ್ನು ಹತ್ಯೆಗೈದು ನೇಣಿಗೆ ಶರಣಾದ ತಾಯಿ!

ರಾಜಸ್ಥಾನದ: ರಾಜಸ್ಥಾನ ದಬಾರ್ಮರ್ ಜಿಲ್ಲೆಯ ಮಂಡಲಿ ಪ್ರದೇಶದಲ್ಲಿ ವಾಸವಿದ್ದ ಮಹಿಳೆಯೊಬ್ಬರು ತನ್ನ ನಾಲ್ವರು ಮಕ್ಕಳನ್ನು ಹತ್ಯೆಗೈದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ವರದಿಯಾಗಿದೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಹಿಳೆ ತನ್ನ ನಾಲ್ಕು ಮಕ್ಕಳನ್ನು ಧಾನ್ಯ ತುಂಬುವ ಡ್ರಮ್​ನೊಳಗೆ ಅಡಗಿಸಿ, ಮುಚ್ಚಳವನ್ನು ಬಿಗಿಯಾಗಿ ಮುಚ್ಚಿದ್ದಾಳೆ. ಉಸಿರಾಡಲಾಗದೆ ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಬನಿಯಾವಾಸ್ ಗ್ರಾಮದ ಊರ್ಮಿಳಾ (27) ಎಂದು ಗುರುತಿಸಲಾಗಿದ್ದು, ನಾಲ್ವರು ಮಕ್ಕಳಾದ ಭಾವನಾ(8), ವಿಕ್ರಮ್(5), ವಿಮಲಾ(3) ಮತ್ತು ಮನಿಶಾ(2) ಎಂದು ಗುರುತಿಸಲಾಗಿದೆ.

ಪೋಲೀಸರ ಮಾಹಿತಿ ಪ್ರಕಾರ, ಈ ದುರ್ಘಟನೆ ಸಂಭವಿಸಲು ಗಂಡ-ಹೆಂಡತಿ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕಿತ್ತಾಟ! ಮಹಿಳೆಯ ಪತಿ ಜೇತಾರಾಮ್ ಊರಲ್ಲಿ ಇಲ್ಲದ ಸಮಯವನ್ನು ಅರಿತು ಮಹಿಳೆ ಮಕ್ಕಳನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಲ್ಲಾ ಐದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ-ಪತ್ನಿಯರ ನಡುವಿನ ಸಂಬಂಧದ ವೈಪರೀತ್ಯದಿಂದ ಮಹಿಳೆ ತನ್ನ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಎಸ್ಪಿ ಕಮಲೇಶ್ ಕುಮಾರ್ ಸ್ಥಳೀಯ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮಹಿಳೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.