ಜೈಪುರ: ಖತರ್ನಾಕ್ ಮಾಂತ್ರಿಕನೊಬ್ಬ ದಂಪತಿಯನ್ನು ತನ್ನ ಸಮ್ಮುಖದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಿ, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸಮಯದಲ್ಲಿ ಅವರ ಮೇಲೆ ಸೂಪರ್ ಗ್ಲೂ ಸುರಿದು ಕೊಲೆ ಮಾಡಿರುವ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ನವೆಂಬರ್ 18ರಂದು ಪೊಲೀಸರು ಉದಯಪುರದ ಗೊಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಬಾವಾಡಿ ಅರಣ್ಯ ಪ್ರದೇಶದಲ್ಲಿ ಎರಡು ಮೃತದೇಹ ಪತ್ತೆಹಚ್ಚಿದ್ದರು. ಮೃತರನ್ನು ಸರ್ಕಾರಿ ಶಾಲಾ ಶಿಕ್ಷಕ ರಾಹುಲ್ ಮೀನಾ (32) ಮತ್ತು ಸೋನು ಕಾನ್ವಾರ್ (31) ಎಂದು ಗುರುತಿಸಲಾಗಿತ್ತು. ಇದೀಗ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 52 ವರ್ಷದ ಆರೋಪಿ ಮಾಂತ್ರಿಕ ಭಲೇಶ್ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ರಾಹುಲ್ ಮತ್ತು ಸೋನು ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ಇಬ್ಬರ ನಡುವೆ ವಿವಾಹೇತರ ಸಂಬಂಧ ಇತ್ತು. ಮೃತದೇಹಗಳು ಪತ್ತೆಯಾದ ಸ್ಥಳದ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, 200 ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮಾಂತ್ರಿಕ ಭಲೇಶ್ ಜೋಶಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದು, ಭಯಾನಕ ಕೃತ್ಯವನ್ನು ಬಿಚ್ಚಿಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಾದ ಭೂಪೇಂದ್ರ ಸಿಂಗ್ ಮತ್ತು ಕುಂದನ್ ಕುವರಿಯಾ ಅವರು ತಿಳಿಸಿದ್ದಾರೆ.
ಅಂದಹಾಗೆ ಈ ಭಲೇಶ್ ಜೋಶಿ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ಮಾಂತ್ರಿಕ. ಸ್ಥಳೀಯ ಉದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಈತನ ಅನುಯಾಯಿಗಳಾಗಿದ್ದಾರೆ. ಕಷ್ಟದಲ್ಲಿರುವ ಜನರು ಕೂಡ ಭಲೇಶ್ ಜೋಶಿ ಬಳಿ ಪರಿಹಾರಕ್ಕಾಗಿ ಹೋಗುತ್ತಾರೆ. ಭದ್ವಿ ಗುಡ ದೇವಸ್ಥಾನದಲ್ಲಿ ಈತ ವಾಸಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಭಲೇಶ್ ಜೋಶಿ ವಾಸವಿದ್ದ ದೇವಸ್ಥಾನದಲ್ಲಿ ಭೇಟಿಯಾದ ಬಳಿಕ ರಾಹುಲ್ ಮತ್ತು ಸೋನು ನಡುವೆ ಅಕ್ರಮ ಸಂಬಂಧ ಬೆಳೆಯಿತು. ಸೋನು ಕೂಡ ಮಾಂತ್ರಿಕನೊಂದಿಗೆ ಆಗಾಗ ಸಂಪರ್ಕದಲ್ಲಿ ಇರುತ್ತಿದ್ದಳು. ಈ ಅಕ್ರಮ ಸಂಬಂಧವು ರಾಹುಲ್ ಪತ್ನಿಗೆ ಗೊತ್ತಾಗಿ, ವೈವಾಹಿಕ ಜೀವದಲ್ಲಿ ಭಾರಿ ಕಲಹಕ್ಕೆ ಕಾರಣವಾಯಿತು ಮತ್ತು ರಾಹುಲ್ ಪತ್ನಿ ಪರಿಹಾರಕ್ಕಾಗಿ ಮಾಂತ್ರಿಕನನ್ನು ಸಂಪರ್ಕಿಸಿದಾಗ, ಸೋನು ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಆಕೆಗೆ ತಿಳಿಸಿದ್ದ.
ಮನೆಯವರಿಗೆ ಅಕ್ರಮ ಸಂಬಂಧದ ಬಗ್ಗೆ ಮಾಂತ್ರಿಕ ತಿಳಿಸಿದ್ದಕ್ಕೆ, ಆತನ ವಿರುದ್ಧವೇ ತಿರುಗಿಬಿದ್ದ ರಾಹುಲ್ ಮತ್ತು ಸೋನು, ಕಿರುಕುಳ ಪ್ರಕರಣ ದಾಖಲಿಸಿ, ನಿಮ್ಮ ಹೆಸರು ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ಎಲ್ಲವನ್ನು ಬಹಿರಂಗಪಡಿಸಿದರೆ, ಸಮಾಜದಲ್ಲಿ ಗೌರವ ನೆಲಸಮವಾಗುತ್ತದೆ ಎಂದು ಭಾವಿಸಿದ ಮಾಂತ್ರಿಕ, ಇಬ್ವರನ್ನು ಕೊಲೆ ಮಾಡುವ ಪ್ಲಾನ್ ರೂಪಿಸುತ್ತಾನೆ.
ತನ್ನ ಪ್ಲಾನ್ನಂತೆ 50 ಟ್ಯೂಬ್ ಸೂಪರ್ ಗ್ಲೂ ಅನ್ನು ಮಾಂತ್ರಿಕ ತರಿಸಿಕೊಳ್ಳುತ್ತಾನೆ. ನ.18ರಂದು ಕೆಲವೊಂದು ಭರವಸೆ ನೀಡಿ ರಾಹುಲ್ ಮತ್ತು ಸೋನು ಇಬ್ಬರನ್ನು ಮಾಂತ್ರಿಕ ಭಲೇಶ್ ಅರಣ್ಯದ ನಿರ್ಜನ ಪ್ರದೇಶವೊಂದಕ್ಕೆ ಕರೆಸಿಕೊಳ್ಳುತ್ತಾನೆ. ಬಳಿಕ ನಿಮ್ಮ ಸಮಸ್ಯೆಗಳಿಂದ ದೂರವಾಗಬೇಕಾದರೆ ಅರಣ್ಯದಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದು ಹೇಳುತ್ತಾನೆ. ತಾನು ಮರೆಯಾಗುವುದಾಗಿ ಹೇಳಿ, ಸ್ವಲ್ಪ ದೂರ ಹೋಗುತ್ತಾನೆ. ಮತ್ತೆ ಮರಳಿ ಬಂದು ಇಬ್ಬರ ಮೇಲೆ ಸೂಪರ್ ಗ್ಲೂ ಸುರಿಯುತ್ತಾನೆ. ತುಂಬಾ ಪರಿಣಾಮಕಾರಿ ಅಂಟು ದ್ರವ ಆಗಿರುವುದರಿಂದ ಸೂಪರ್ ಗ್ಲೂನಲ್ಲಿ ರಾಹುಲ್ ಮತ್ತು ಸೋನು ಬಂಧಿಯಾಗುತ್ತಾರೆ. ಬಿಡಿಸಿಕೊಳ್ಳಲು ಒದ್ದಾಡುವ ಸಮಯದಲ್ಲಿ ಮಾಂತ್ರಿಕ ಭಲೇಶ್ ಚಾಕು ತೆಗೆದು ಇಬ್ಬರಿಗು ಇರಿದಿದ್ದಾನೆ.
ರಸ್ತೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಇಬ್ಬರ ಮೃತದೇಹ ಬಿದ್ದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಚಾಕುವಿನಿಂದ ಇರಿದಿರುವ ಗಾಯ ಮಾತ್ರವಲ್ಲದೆ, ಇಬ್ಬರು ಗ್ಲೂನಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಬ್ಬರು ಚರ್ಮ ಕಿತ್ತುಬಂದಿದೆ. ಅಲ್ಲದೆ, ರಾಹುಲ್ ಗುಪ್ತಾಂಗ ಸಹ ಕಿತ್ತು ಬಂದಿದೆ. ಆರೋಪಿ ಮಾಂತ್ರಿಕ ಇಬ್ಬರ ಮೃತದೇಹವನ್ನು ಸುಡಲು ಸಹ ಯತ್ನಿಸಿದ್ದಾರೆ.
ಮಾಂತ್ರಿಕನ ಬೆರಳುಗಳ ಮೇಲೆ ಸೂಪರ್ ಗ್ಲೂ ಕುರುಹುಗಳು ಕಂಡುಬಂದಾಗ ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿರುವುದು ಪೊಲೀಸರಿಗೆ ಖಚಿತವಾಗಿದೆ. ಆರೋಪಿ ಮಾಂತ್ರಿಕನ ಪ್ರಭಾವ ಎಷ್ಟಿತ್ತು ಅಂದರೆ, ಆತನ ಬಂಧನವಾದಾಗ, ಆತನನ್ನು ಬಿಡುಗಡೆ ಮಾಡಲು ಅನೇಕ ಪ್ರಭಾವಿಗಳು ಸಹ ಠಾಣೆಯ ಬಳಿ ಬಂದರು. ಆದರೆ, ಪ್ರಕರಣದ ಭೀಕರ ವಿವರಗಳನ್ನು ಹಾಗೂ ಮಾಂತ್ರಿಕ ಕರಾಳ ಮುಖವನ್ನು ತಿಳಿಸಿದಾಗ ಪ್ರಭಾವಿಗಳು ತಕ್ಷಣ ಅಲ್ಲಿಂದ ಕಾಲ್ಕಿತ್ತರು ಎಂದು ತನಿಖಾಧಿಕಾರಿಗಳು ತಿಳಿಸಿದರು. (ಏಜೆನ್ಸೀಸ್)