ಜೈಪುರ: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಮಣ್ಣು ರಕ್ಷಣೆ ಸಲುವಾಗಿ ಜಾಗತಿಕ ಅಭಿಯಾನ ಹಮ್ಮಿಕೊಂಡಿದ್ದು, ಈಗಾಗಲೇ 26 ದೇಶಗಳಲ್ಲಿ ಜಾಗೃತಿ ಮೂಡಿಸಿ ನೀತಿರೂಪಣೆ ಕುರಿತು ಒಪ್ಪಂದಗಳನ್ನೂ ಮಾಡಿಕೊಂಡು ಭಾರತಕ್ಕೆ ಆಗಮಿಸಿದ್ದಾರೆ. ಮಣ್ಣು ರಕ್ಷಣೆ ಅಭಿಯಾನಕ್ಕಾಗಿ ಒಪ್ಪಂದ ಮಾಡಿಕೊಂಡ ಭಾರತದ ಪ್ರಥಮ ರಾಜ್ಯ ಗುಜರಾತ್ ಆಗಿದ್ದು, ಇದೀಗ ರಾಜಸ್ಥಾನ ಕೂಡ ಅಭಿಯಾನಕ್ಕೆ ಬೆಂಬಲ ಸೂಚಿಸಿ ಒಪ್ಪಂದಕ್ಕೆ ಸಹಿ ಮಾಡಿದೆ.
ಮಣ್ಣು ಉಳಿಸಿ ಅಭಿಯಾನದ ಅಂಗವಾಗಿ ಈಶ ಔಟ್ ರೀಚ್ ಜೊತೆಗಿನ ನಿವೇದನಾ ಪತ್ರಕ್ಕೆ (MoU) ರಾಜಸ್ಥಾನದ ಕೃಷಿಸಚಿವ ಲಾಲಚಂದ್ ಕಟಾರಿಯಾ ಸಹಿ ಮಾಡಿದ್ದು, ಬಳಿಕ ಸದ್ಗುರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ಈ ಅಭಿಯಾನಕ್ಕೆ ಅವರು ತಮ್ಮ ಬೆಂಬಲವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ತನ್ನ ಫಲವತ್ತಾದ ಕೃಷಿ ಪ್ರದೇಶಗಳಲ್ಲಿ ಮರುಭೂಮೀಕರಣ ತಡೆದು ಮತ್ತು ಹಿಮ್ಮುಖಗೊಳಿಸುವ ಮೂಲಕ ಮಣ್ಣು ಉಳಿಸುವುದಕ್ಕಾಗಿ ನಿವೇದನ ಪತ್ರವನ್ನು(MoU) ಸಹಿ ಮಾಡಿದ ಭಾರತದ ಎರಡನೇ ರಾಜ್ಯವಾಗಿದೆ. ಜೈಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರೈತ ಹಾಗೂ ಮಣ್ಣಿನ ಏಳಿಗೆಯ ಪರವಾಗಿರುವ ಕೃಷಿ ನೀತಿಗಳನ್ನು ಅಳವಡಿಸಿಕೊಳ್ಳಲು ಬದ್ಧರಾಗಿ, ರಾಜ್ಯದ ಮಣ್ಣನ್ನು ಉಳಿಸುವ ನಿಟ್ಟಿನಲ್ಲಿ ಕೃಷಿ ಸಚಿವರು ಮತ್ತು ಸದ್ಗುರು ಸಹಿ ಮಾಡಿದ ನಿವೇದನಾ ಪತ್ರಗಳನ್ನು ಪರಸ್ಪರ ಬದಲಾಯಿಸಿಕೊಂಡರು. ನಂತರ ಸದ್ಗುರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಅವರಿಗೆ ಮಣ್ಣಿನ ಪುನಶ್ಚೇತನದ ಹೊತ್ತಗೆಯನ್ನು ಅರ್ಪಿಸಿದರು.
ಮಣ್ಣು ನಮ್ಮ ತಾಯಿ. ನಾವು ಸದಾ ಮಣ್ಣನ್ನು ಪ್ರೀತಿಯಿಂದ ಮತ್ತು ಪೂಜ್ಯತೆಯಿಂದ ನಡೆಸಿಕೊಂಡು ಬಂದಿದ್ದೇವೆ. ಅದರ ಅವನತಿಯ ಬಗ್ಗೆ ಕೇಳಲು ನನಗೆ ನೋವಾಗುತ್ತದೆ, ಹಾಗೆಯೇ ನಾವೆಲ್ಲರೂ ಭಾಗಿ ಆಗಬೇಕಾದಂತಹ #ಮಣ್ಣುಉಳಿಸಿ ಅಭಿಯಾನವನ್ನು ಸದ್ಗುರು ಅವರು ಆರಂಭಿಸಿರುವುದು ಮನಮುಟ್ಟಿದೆ. ಇದರ ಯಶಸ್ಸನ್ನು ನಾನು ಹಾರೈಸುತ್ತೇನೆ ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮೂಲಕ ಹೇಳಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಸದ್ಗುರು, #ಮಣ್ಣುಉಳಿಸಿ ಅಭಿಯಾನದ ಬಗ್ಗೆ ನಿಮ್ಮ ಬೆಂಬಲಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ನಾಯಕತ್ವದಲ್ಲಿ ರಾಜಸ್ಥಾನವು ಮಣ್ಣು ಪರವಾದ ನೀತಿಗಳನ್ನು ಅಳವಡಿಸಿ, ಈ ಸುಂದರವಾದ ಭೂಮಿಯನ್ನು ಆಹಾರ ಮತ್ತು ನೀರು ಸಮರ್ಥವಾದ ಪ್ರದೇಶವನ್ನಾಗಿ ಪರಿವರ್ತಿಸುವುದರಲ್ಲಿ ಮುಂದಾಳತ್ವ ವಹಿಸುವಂತೆ ಆಗಲಿ ಎಂದು ರಾಜಸ್ಥಾನ ಮುಖ್ಯಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಣ್ಣು ಉಳಿಸಿ ಅಭಿಯಾನದ ಅಂಗವಾಗಿ ಜೈಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ಧಿ ಸಚಿವ ರಾಜೇಶ್ ಚಂದ್ ಮೀನಾ, ಕೃಷಿ ಸಚಿವ ಲಾಲಚಂದ್ ಕಟಾರಿಯಾ, ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಭಾಗವಹಿಸಿ, ರಾಜ್ಯ ಮತ್ತು ದೇಶದ ಕೃಷಿ ಭೂಮಿಗಳು ಬರಡಾಗುವುದನ್ನು ತಡೆಯುವಂತಹ ಕಾರ್ಯನೀತಿ ಬೆಂಬಲಿತ ಕ್ರಮಗಳನ್ನು ತುರ್ತಾಗಿ ಹೊರತರಬೇಕಾಗಿರುವುದರ ಬಗ್ಗೆ ಕರೆ ಕೊಟ್ಟರು.
ನಾವು ಪ್ರಕೃತಿಯಲ್ಲಿ ನೋಡುವ ಎಲ್ಲವೂ ಮಣ್ಣಿನಿಂದಲೇ ಬರುವುದು ಮತ್ತು ಮರಳಿ ಮಣ್ಣಿಗೇ ಹೋಗಿ ಸೇರುವುದು ಎಂದು ಸಚಿವ ರಾಜೇಶ್ ಚಂದ್ ಮೀನಾ ಹೇಳಿದರು. ಇದು ಸದ್ಗುರು ಅವರ ವೈಯುಕ್ತಿಕ ಅಭಿಯಾನವಲ್ಲ. ಪ್ರತಿ ಸಾಮಾನ್ಯ ಮನುಷ್ಯನಿಗೂ ಪ್ರಯೋಜನ ಆಗುವಂಥದ್ದು ಎಂದ ಅವರು ನೆರೆದಿದ್ದ ಜನರಲ್ಲಿ, ಅದೂ ಯುವ ವರ್ಗವನ್ನು ಪರಿಸರ ಸ್ನೇಹಿ ವ್ಯವಹಾರಗಳ ಮೂಲಕ ಮಣ್ಣನ್ನು ಪುನಶ್ಚೇತನಗೊಳಿಸುವುದಕ್ಕೆ ಬದ್ಧರಾಗುವಂತೆ ಒತ್ತಾಯಿಸಿದರು.
ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ಕೃಷಿ ಸಚಿವ ಲಾಲಚಂದ್ ಕಟಾರಿಯಾ, ವಿಜ್ಞಾನ ತಂತ್ರಜ್ಞಾನಗಳು ಪ್ರಚಲಿತವಾದ ಕಾಲಕ್ಕೂ ಮುಂಚೆ ಜನರು ಪ್ರಕೃತಿಯ ಜೊತೆ ಸಾಮರಸ್ಯದಿಂದ ಸುದೀರ್ಘವಾಗಿ ಮತ್ತು ಆರೋಗ್ಯವಾಗಿ ಬದುಕುತ್ತಿದ್ದರು ಎಂದು ನೆನಪಿಸಿದರು. ನೀತಿ ರಚನೆಯ ಮಾರ್ಗಸೂಚಿಗಳಿರುವ ಮಣ್ಣು ಉಳಿಸಿ ನೀತಿಗಳ ಕೈಪಿಡಿಯನ್ನು ಸಚಿವರಿಗೆ ಸದ್ಗುರು ನೀಡಿದರು.
ಸಾವಿರಾರು ಜನರು ಜೈಪುರದ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ ನೆರೆದು, ಹಬ್ಬದಂತೆ ಅತಿ ಸಂಭ್ರಮದಿಂದ, ಪ್ರಖ್ಯಾತ ಕಲಾವಿದರಾದ ಇಳಾ ಅರುಣ್, ಕುತಲೇ ಖಾನ್, ಈಶದಲ್ಲೇ ಅರಳಿದ ಸೌಂಡ್ಸ್ ಆಫ್ ಈಶ ಮತ್ತು ಈಶ ಸಂಸ್ಕೃತಿ ತಂಡಗಳು ನಡೆಸಿಕೊಟ್ಟ ಸಂಗೀತ ನೃತ್ಯ ಪ್ರದರ್ಶನಗಳನ್ನು ಸವಿದು ಆನಂದಿಸಿದರು.