ಜೈಪುರ: ಮಹಿಳೆಯೊಬ್ಬರನ್ನು ಬೈಕ್ಗೆ ಕಟ್ಟಿಹಾಕಿ ಗ್ರಾಮದಲ್ಲಿ ಎಳೆದಾಡಿರುವ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಡಿಯೋದಲ್ಲಿನ ದೃಶ್ಯ ಮನಕಲಕುವಂತಿದೆ. ವ್ಯಕ್ತಿಯೊಬ್ಬ ಮಹಿಳೆ ಕಾಲಿಗೆ ಹಗ್ಗ ಕಟ್ಟಿ, ಆ ಹಗ್ಗವನ್ನು ತನ್ನ ಬೈಕ್ಗೆ ಕಟ್ಟಿದ್ದಾನೆ. ಆ ಬೈಕ್ ಅನ್ನು ಗ್ರಾಮದಲ್ಲಿ ಡ್ರೈವ್ ಮಾಡಿದ್ದಾನೆ. ಆರೋಪಿ ಆ ವ್ಯಕ್ತಿ ತನ್ನ ಬೈಕ್ಗೆ ಕಟ್ಟಿಹಾಕಿ ಹಿಂಸೆ ನೀಡಿದ ಮಹಿಳೆ ಬೇರೆ ಯಾರು ಅಲ್ಲ ಆತನ ಹೆಂಡತಿಯೇ.
ಇದನ್ನು ಓದಿ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಾನಹಾನಿ ಕೇಸ್; ತಡೆಯಾಜ್ಞೆ ನೀಡಿ ನೋಟಿಸ್ ಜಾರಿ ಮಾಡಿದ ಕೋರ್ಟ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮತ್ತೊಂದು ಮಹಿಳೆಯನ್ನು ಕಾಣಬಹುದು. ಆದರೆ ಆ ಮಹಿಳೆ ಈತನ ನೀಚ ಕೃತ್ಯ ನೋಡಿಯು ಏನನ್ನು ಪ್ರಶ್ನಿಸಿದೆ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಳೆ. ಗ್ರಾಮದವರು ಎಲ್ಲರೂ ನೋಡುತ್ತಾ ನಿಂತಿದ್ದಾರೆ. ಗ್ರಾಮದಲ್ಲಿನ ಯಾರೋ ಒಬ್ಬರು ಆ ವ್ಯಕ್ತಿಯ ಹೇಯ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರು ಗ್ರಾಮದ ಜನರು ನಿಂತು ನೋಡುವುದನ್ನು ನಾವು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೊನೆಯಲ್ಲಿ ಮತ್ತೊಬ್ಬ ಮಹಿಳೆ ಬಂದು ಆಕೆಗೆ ಸಹಾಯ ಮಾಡಿದ್ದಾರೆ.
ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿ ನೋಡಲು ಹೋಗುತ್ತೇನೆ ಎಂದಿದ್ದಕ್ಕೆ ಹೆಂಡತಿಗೆ ಪತಿ ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಈ ಘಟನೆ ನಡೆದು ಒಂದು ತಿಂಗಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಹರಸಿಂಗ್‌ಪುರ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆರೋಪಿ ಯುವಕನ ಹೆಸರು ಪ್ರೇಮರಾಮ್ ಮೇಘವಾಲ್(32), ತನ್ನ ಪತ್ನಿಯನ್ನು ದ್ವಿಚಕ್ರವಾಹನದ ಹಿಂಭಾಗಕ್ಕೆ ಹಗ್ಗದಿಂದ ಕಟ್ಟಿ ಗ್ರಾಮಕ್ಕೆ ಎಳೆದೊಯ್ದಿದ್ದಾನೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಪಂಚೌರಿ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಸುರೇಂದ್ರ ಕುಮಾರ್ ತಿಳಿಸಿದರು.
ವಿಷಯ ಬೆಳಕಿಗೆ ಬಂದ ಕೂಡಲೇ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ತನ್ನ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೇಮಾರಾಮ್ಗೆ ಕುಡಿತ ಚಟವಿದ್ದು ಪತ್ನಿಯನ್ನು ಥಳಿಸುತ್ತಿದ್ದ. ಹೆಂಡತಿಯನ್ನು ಗ್ರಾಮದಲ್ಲಿ ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.(ಏಜೆನ್ಸೀಸ್)