ನ್ಯೂಸ್

ರಾಜಸ್ಥಾನ ಹಗ್ಗಜಗ್ಗಾಟಕ್ಕೆ ತೆರೆ; ಆಗಸ್ಟ್​ 14ರಿಂದ ಅಧಿವೇಶನ ನಡೆಸಲು ರಾಜ್ಯಪಾಲರ ಅನುಮತಿ

ಜೈಪುರ: ಭಾರಿ ಹಗ್ಗಜಗ್ಗಾಟದ ಬಳಿಕ ರಾಜಸ್ಥಾನ ರಾಜ್ಯಪಾಲ ಕಲ್ರಾಜ್​ ಮಿಶ್ರಾ ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಸಲು ಸಿಎಂ ಅಶೋಕ್​ ಗೆಹ್ಲೋಟ್​ಗೆ ಅನುಮತಿ ನೀಡಿದ್ದಾರೆ.

ಬುಧವಾರವೂ (ಜುಲೈ 29) ಸಿಎಂ ಅಶೋಕ್​ ಗೆಹ್ಲೋಟ್​ ಕಲಾಪ ನಡೆಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಅಂತಿಮವಾಗಿ ಆಗಸ್ಟ್​ 14ರಿಂದ ಅಧಿವೇಶನ ನಡೆಸಲು ಹಸಿರು ನಿಶಾನೆ ತೋರಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕಲಾಪಕ್ಕೆ ಸಮ್ಮತಿ ಸೂಚಿಸಿದ್ದ ರಾಜ್ಯಪಾಲರು ಮೂರು ಷರತ್ತುಗಳನ್ನು ವಿಧಿಸಿದ್ದರು. ಅಧಿವೇಶನಕ್ಕೆ 21 ಮುನ್ನ ಶಾಸಕರಿಗೆ ನೋಟಿಸ್​ ನೀಡಿ. ಕಲಾಪದ ವೇಳೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ, ವಿಶ್ವಾಸ ಮತ ಯಾಚಿಸುವುದಾರೆ ಕಲಾಪದ ನೇರ ಪ್ರಸಾರ ನಡೆಸಿ ಎಂದು ಸೂಚಿಸಿದ್ದರು.

ಸಿಎಂ ಸಲ್ಲಿಸಿದ್ದ ಪರಿಷ್ಕೃತ ಪ್ರಸ್ತಾವನೆಯಲ್ಲಿ ವಿಶ್ವಾಸ ಮತ ಯಾಚನೆಯ ಪ್ರಸ್ತಾವನೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಸಿಎಂಗೆ ಮತ್ತೊಮ್ಮೆ ರಾಜ್ಯಪಾಲರು ಸೂಚಿಸಿದ್ದರು. ಹೀಗಾಗಿ ಆಗಸ್ಟ್​ 14ರಿಂದ ಕಲಾಪ ನಡೆಸಲು ಅನುಮತಿ ನೀಡುವಂತೆ ಕೋರಿ ಸಿಎಂ ಮೂರನೇ ಬಾರಿಗೆ ಪ್ರಸ್ತಾವನೆ ಕಳುಹಿಸಿದ್ದರು.

ಈ ನಡುವೆ, ಸಚಿನ್​ ಪೈಲಟ್​ ಹಾಗೂ ಅವರ ಬೆಂಬಲಿಗರ ಶಾಸಕರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸ್ಪೀಕರ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.