ಬೆಂಗಳೂರು: ಆರ್ ಆರ್ ನಗರ ಕೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಣಕ್ಕಿಳಿದಿದ್ದಾರೆ. ಡಿ.ಕೆ.ರವಿ ಈಗಿಲ್ಲವಾದರೂ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಆದರೂ ಕುಸುಮಾ, 'ಡಿ.ಕೆ. ರವಿ ಹೆಸರನ್ನು ಚುನಾವಣೆಗೆ ಬಳಸುವುದಿಲ್ಲ' ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಸುಮಾ, 'ನಾನು ಆರ್ ಆರ್ ನಗರ ಕ್ಷೇತ್ರದ ಹೆಣ್ಣು ಮಗಳು. ಬೇರೆ ಕ್ಷೇತ್ರದಿಂದ ಬಂದಿಲ್ಲ. ಕ್ಷೇತ್ರ ದೊಡ್ಡದಿರಬಹುದು. ಆದರೆ, ರಾಜಕೀಯ ನಮಗೆ ಹೊಸದಲ್ಲ. ಪ್ರತಿಸ್ಪರ್ಧಿಗಳು ಯಾರು ಅನ್ನೋದು ಮುಖ್ಯವಲ್ಲ. ಈ ಕ್ಷೇತ್ರದ ಎಲ್ಲ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ನಾನು ರಾಜಕೀಯಕ್ಕೆ ಬರಬೇಕೆಂದು ಅಂದುಕೊಂಡಿರಲಿಲ್ಲ. ಈಗ ಅವಕಾಶ ಸಿಕ್ಕಿದೆ, ಬಳಸಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಪತಿ ಡಿ.ಕೆ.ರವಿ ಹೆಸರಿಗೆ ಧಕ್ಕೆ ತರುವಂತಹ ಕೆಲಸವನ್ನು ನಾನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ' ಎಂದರು. 'ಅತ್ತೆ ಗೌರಮ್ಮ ಅವರ ಹೇಳಿಕೆ ನನಗೆ ಆರ್ಶೀವಾದ ಇದ್ದಂತೆ. ಅವರು ದೊಡ್ಡವರು, ಅವರ ಆರ್ಶೀವಾದ ಸದಾ ನನ್ನ ಮೇಲಿರಲಿದೆ. ರವಿ ಅವರ ಹೆಸರನ್ನ ಚುನಾವಣೆಗಾಗಿ ಬಳಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'‘ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು? ಡಿ.ಕೆ. ರವಿ ಹೆಂಡ್ತಿ ಅನ್ನೋ ಯೋಗ್ಯತೆಯನ್ನು 6 ವರ್ಷದಲ್ಲೇ ಕಳೆದುಕೊಂಡ್ಲು. ನನ್ನ ಮಗನನ್ನು ಅವತ್ತು ಮಣ್ಣಲ್ಲಿ ಬಿಸಾಕಿ ಹೋದವಳು ಇವತ್ತಿನವರೆಗೂ ಬಂದಿಲ್ಲ. ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿದುಕೊಂಡಿದ್ದೇನೆ. ಚುನಾವಣೆಯಲ್ಲಿ ನನ್ನ ಮಗನ ಫೋಟೋ-ಹೆಸರು ಬಳಸಿಕೊಂಡರೆ ಪ್ರಚಾರ ಪತ್ರಕ್ಕೆ ಬೆಂಕಿ ಹಚ್ಚಿಸ್ತೀನಿ'' ಎಂದು ಸೊಸೆ ವಿರುದ್ಧ ಗೌರಮ್ಮ ಈ ಹಿಂದೆ ಕಿಡಿಕಾರಿದ್ದರು. ಈ ಬಗ್ಗೆ ಅಂದಿನಿಂದ ಮೌನವಾಗಿಯೇ ಇದ್ದ ಕುಸುಮಾ, ಇದೀಗ ಅತ್ತೆಯ ಕೋಪವನ್ನು ಆರ್ಶೀವಾದ ಎಂದು ನಯವಾಗಿಯೇ ಸ್ವೀಕರಿಸಿದ್ದಾರೆ.
'ಕ್ಷೇತ್ರದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲರೂ ನನ್ನನ್ನು ಒಪ್ಪಿಕೊಳ್ತಾರೆಂಬ ಭರವಸೆಯಿದೆ' ಎಂದು ಕುಸುಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.