ನ್ಯೂಸ್

ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ

ಬೆಂಗಳೂರು: ನಾನು ಹನುಮಂತರಾಯಪ್ಪನ ಮಗಳ ಜತೆಗೆ ಡಿ.ಕೆ. ರವಿ ಪತ್ನಿ ಕೂಡ ಹೌದು. ಗೌರಮ್ಮ ಅವರು ನನ್ನ ತಾಯಿ ಇದ್ದಂತೆ. ಅವರ ಆರ್ಶೀವಾದ ಸದಾ ನನ್ನ ಮೇಲೆ ಇದೆ. ಅವರು ಏನೇ ಮಾತನಾಡಿದರೂ ಅದೇ ನನ್ನ ಪಾಲಿಗೆ ಆರ್ಶೀವಾದ... ಎಂದು ಐಎಎಸ್​ ಅಧಿಕಾರಿ ದಿ. ಡಿ.ಕೆ.ರವಿ ಪತ್ನಿ ಕುಸುಮಾ ಹೇಳಿದ್ದಾರೆ.

ರಾಜ್ಯದಲ್ಲೀಗ ಉಪಚುನಾವಣೆ ಸಮರ ರಂಗೇರಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕುಸುಮಾ ಅಖಾಡಕ್ಕಿಳಿದ್ದಿದ್ದಾರೆ. ಈ ಕುರಿತು ಕಳೆದ ವಾರವಷ್ಟೇ ಆಕ್ರೋಶ ಹೊರಹಾಕಿದ್ದ ಡಿ.ಕೆ.ರವಿ ಅವರ ತಾಯಿ ಗೌರಮ್ಮ, 'ನನ್ನ‌ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿದರೆ ಹುಡುಗರನ್ನು ಕರೆದುಕೊಂಡು ಹೋಗಿ ಪ್ರಚಾರ ಪತ್ರಗಳಿಗೆ ಬೆಂಕಿ‌ ಹಚ್ಚಿಸ್ತೀನಿ' ಎಂದು ಸೊಸೆ ವಿರುದ್ಧ ಕಿಡಿಕಾರಿದ್ದರು. ಗೌರಮ್ಮರ ಈ ಹೇಳಿಕೆ ಚುನಾವಣೆ ಸಮರದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ಎಲ್ಲ ಬೆಳವಣಿಗೆ ಬಳಿಕ ದಿಗ್ವಿಜಯ ನ್ಯೂಸ್​ ಜತೆ ಗುರುವಾರ ಮೊದಲ ಪ್ರತಿಕ್ರಿಯೆ ನೀಡಿದರ ಕುಸುಮಾ, ಯಾವುದೇ ಹೇಳಿಕೆಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿಯಷ್ಟೇ ಮುಖ್ಯ. ಕೆಲಸ ಮಾಡದೆ ನಕಲಿ ಬಿಲ್ ಮಾಡಿದ್ದಾರೆ. ಇದೇ ನಮ್ಮ ಚುನಾವಣೆಯ ಅಜೆಂಡಾ. ನಾನು ರಾಜಕೀಯ ಕುಟುಂಬದಿಂದ ಬಂದವಳು. ನನಗೂ ರಾಜಕೀಯ ಗೊತ್ತಿದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಸಮಾಜ ಸೇವೆಗಾಗಿ ಬಂದಿದ್ದೇನೆ. ನಾನು ಹನುಮಂತರಾಯಪ್ಪನ ಮಗಳ ಜತೆಗೆ ಡಿ.ಕೆ. ರವಿ ಪತ್ನಿ ಕೂಡ ಹೌದು ಎಂದರು.

ಡಿ.ಕೆ. ರವಿ ಪತ್ನಿ ಎಂದು ನನಗೆ ಟಿಕೆಟ್​ ಕೊಟ್ಟಿಲ್ಲ. ವಿದ್ಯಾವಂತೆ, ಮಹಿಳೆ ಎಂಬ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕುಸುಮಾ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ತುಮಕೂರಿಗೆ ಹೋಗಿ ಗೌರಮ್ಮನ ಆರ್ಶೀವಾದ ಪಡೆಯುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಸುಮಾ, 'ಅವರ ಆರ್ಶೀವಾದ ಸದಾ ನನ್ನ ಮೇಲೆ ಇದೆ' ಎಂದರು.