ವಿರಾಜಪೇಟೆ ಶ್ರೀ ಮುತ್ತಪ್ಪನ್ ದೇವಾಲಯದ ವತಿಯಿಂದ ಪಣಿಕರ್ ಪಟ್ಟ ಪಡೆದ ರಾಜನ್ ಅವರೊಂದಿಗೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.  
ನ್ಯೂಸ್

ರಾಜನ್‌ಗೆ ಪಣಿಕರ್ ಪಟ್ಟ ಪ್ರದಾನ

ಸುದೀರ್ಘ ದೈವ ಕೋಲ ಸೇವೆ ಮಾಡಿದ ಮೂರನೇ ವ್ಯಕ್ತಿ

ವಿರಾಜಪೇಟೆ: ಪುರಾತನ ಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಒಂದೇ ದೇಗುಲದಲ್ಲಿ ಸುದೀರ್ಘ ಕಾಲ ದೈವ ಸೇವೆ ಮಾಡುವ ಪೂಜಾಕರ್ಮಿಗಳಿಗೆ ನೀಡಲಾಗುವ ಗೌರವ ಸೂಚಕ ಪಣಿಕರ್ ಪಟ್ಟವನ್ನು ಎಡಯನ್ನೂರು ನಿವಾಸಿ ರಾಜನ್ ಅವರಿಗೆ ನೀಡಲಾಯಿತು.

ವಿರಾಜಪೇಟೆ ನಗರದ ಮೀನುಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ವತಿಯಿಂದ 81ನೇ ವಾರ್ಷಿಕ ತೆರೆ ಮಹೋತ್ಸವ ಇತ್ತೀಚೆಗೆ ನಡೆಯಿತು. ಈ ಸಂಧರ್ಭದಲ್ಲಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಾನಾಡ್ ಎಡಯನ್ನೂರು ನಿವಾಸಿ ನೆಲ್ಲಿತರಸ್ಸಿಯಿಲ್ ಚಂದು ಪಣಿಕರ್ ಅವರ ಪುತ್ರ ರಾಜನ್ ಅವರಿಗೆ ದೇಗುಲದಲ್ಲಿ ಸಲ್ಲಿಸಿದ ಸುದೀರ್ಘ ದೈವ ಕೋಲ ಸೇವೆಯನ್ನು ಪರಿಗಣಿಸಿ ಪಣಿಕರ್ ಪಟ್ಟ ನೀಡಿ ಗೌರವಿಸಲಾಯಿತು.

ಕೇರಳ ರಾಜ್ಯದ ಪುರಾತನ ದೇವಾಲಯಗಳಲ್ಲಿ ಸೇವೆ ಮಾಡುವ ವಿಶೇಷ ವ್ಯಕ್ತಿಗಳನ್ನು ಗುರುತಿಸುವುದು ವಾಡಿಕೆಯಾಗಿದೆ. ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜೆಗಳು, ವಾರ್ಷಿಕ ಉತ್ಸವಗಳು ಹಾಗೂ ಇತರ ಸೇವೆಗಳಲ್ಲಿ ಸಕ್ರಿಯರಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ವ್ಯಕ್ತಿಗಳನ್ನು ಗಣನೆ ಮಾಡುವುದು ಸಂಪ್ರದಾಯವಾಗಿದೆ.

ಮೂವರಿಗೆ ಸಿಕ್ಕಿದ್ದು ವಿಶೇಷ: ರಾಜನ್ ಅವರ ತಂದೆ ಚಂದು ಪಣಿಕರ್, ತಾತ ಕಣ್ಣನ್ ಪಣಿಕರ್ ಅವರು ಕುಟುಂಬ ಮುತ್ತಪ್ಪನ್ ದೈವದ ವಿವಿಧ ಪ್ರಕಾರಗಳ ಕೋಲಗಳನ್ನು ಕೇರಳ, ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಕೋಲ ಕಟ್ಟಿ ನಡೆಸಿಕೊಂಡು ಬಂದವರು. ಇವರು ಸೇವೆ ಸುದೀರ್ಘ ಅವಧಿಗೆ ಮೀಸಲಾಗಿರುತ್ತದೆ. ಕೆಲವು ಸಮಯದಲ್ಲಿ ಕುಟುಂಬಕ್ಕೆ ಹತ್ತಿರವಾದ ಇನ್ನೊಂದು ಮನೆತನಕ್ಕೆ ಸೇರಿದ ಕುಟುಂಬ ವ್ಯಕ್ತಿಗಳಿಂದ ದೈವ ಕಾರ್ಯಗಳು ನಡೆಸುವ ಪ್ರಮೇಯವಾಗುತ್ತದೆ. ಹಿನ್ನೆಲೆಯಲ್ಲಿ ರಾಜನ್ ಅವರು ತನ್ನ ಅಜ್ಜ ಕಣ್ಣನ್ ಪಣಿಕರ್ ಅವರೊಂದಿಗೆ ವಿರಾಜಪೇಟೆ ಮುತ್ತಪ್ಪ ದೇಗುಲಕ್ಕೆ ಆಗಮಿಸುತಿದ್ದರು. ಬಳಿಕ ತಂದೆಯೊಂದಿಗೆ ಹೀಗೆ ಮುಂದುವರೆದ ದೈವ ಕೋಲ ಕಟ್ಟುವ ಕಾಯಕದಲ್ಲಿ ತೊಡಗಿ ಸುಮಾರು 50 ವರ್ಷಗಳು ಸಂದಿವೆ. ಸುಮಾರು 12 ವರ್ಷಗಳ ಕಾಲ ವಸೂರಿ ಮಾಲ ತೆರೆನಂತರ ಮೂವತ್ತು ವರ್ಷಗಳು ಶಾಸ್ತಪ್ಪನ್ ತೆರೆಯನ್ನು ಕಟ್ಟುತ್ತಾ ಬಂದಿದ್ದಾರೆ. ಇವರು ಶ್ರೀ ಚೈತನ್ಯ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ನೀಡಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ ದೇವಾಲಯದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ಹಾಗೂ ಭಕ್ತಜನಗಳ ಸಮ್ಮುಖದಲ್ಲಿ ದೈವಿಕ ವಿಧಿವಿಧಾನಗಳನ್ನು ನಡೆಸಿ ರಾಜನ್ ಅವರಿಗೆ ಗೌರವ ಪಣಿಕರ್ ಪಟ್ಟ ನೀಡಿ ಗೌರವಿಸಲಾಯಿತು.

ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಅಧ್ಯಕ್ಷ ಟಿ.ಕೆ.ರಾಜನ್ ಮಾತನಾಡಿ, ದೈವ ಕೋಲ ಕಟ್ಟುವ ಹಿರಿಯ ದೈವಕರ್ಮಿಯೊಬ್ಬರಿಗೆ ಪಣಿಕರ್ ಗೌರವ ಪದವಿ ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ. ಇದು ದೈವ ಇಚ್ಛೆಯಾಗಿದ್ದು, ದೇವಾಲಯಕ್ಕೆ ಮುಂದೆಯು ಶ್ರೀಯುತರ ಸೇವೆ ಮುಂದುವರೆಯುವಂತಾಗಲಿ ಎಂದರು.

ದೇವಾಲಯದ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರಾದ ಟಿ.ಎಸ್. ಗೋವಿಂದನ್, ಉಪಾಧ್ಯಕ್ಷ ಸಿ.ಆರ್. ವಾಸು, ಕಾರ್ಯದರ್ಶಿಗಳಾದ ಪ್ರಭಾಕರನ್, ಆಡಳಿತ ಮಂಡಳಿ ಸದಸ್ಯರಾದ ವಲ್ಸನ್,ಪ್ರಕಾಶ್ ಆಲಕಂಡಿ ದೇವಸ್ಥಾನದ ಉತ್ಸವ ಸಮಿತಿ ಸದಸ್ಯರಾದ ಪಿ.ಜಿ.ಸುಮೇಶ್, ಸಿ.ಆರ್.ಬಾಬು. ಎಂ.ಕೆ.ಸೈಜು, ದಿನೇಶ್ ನಂಬಿಯಾರ್, ಟಿ.ಜಿ.ರಂಜಿತ್, ಜನಾರ್ದನ, ಟಿ.ಆರ್. ಗಣೇಶ್, ಸತೀಶ್, ಸಜೀವನ್, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.