ನ್ಯೂಸ್

ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು...

ಬೆಂಗಳೂರು: ಡಾ.ರಾಜಕುಮಾರ್​ ಹಾಗೂ ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಸಮೂಹದ ನಡುವೆ ಒಂದಷ್ಟು ಕಾಲ ಶೀತಲ ಸಮರ, ಸಣ್ಣ ಸಂಘರ್ಷ ನಡೆದಿದ್ದು ಹೊಸ ವಿಷಯವೇನಲ್ಲ. ಆದರೆ ಇದೀಗ ಇಬ್ಬರೂ ದಿಗ್ಗಜರ ಅಭಿಮಾನಿಗಳು ಅವೆಲ್ಲವನ್ನೂ ಮರೆತು ಒಂದಾಗಿದ್ದಾರೆ. ಮಾತ್ರವಲ್ಲ ಜಂಟಿ ಹೋರಾಟಕ್ಕೂ ಸಜ್ಜಾಗಿದ್ದಾರೆ.

ಕನ್ನಡ ಚಲನಚಿತ್ರರಂಗದ ಈ ಇಬ್ಬರು ಮೇರುನಟರಿಗೆ ದೊಡ್ಡ ಅಭಿಮಾನಿ ಸಮೂಹವೇ ಇದ್ದರೂ, ಇಬ್ಬರ ಅಭಿಮಾನಿಗಳು ಒಗ್ಗೂಡುವುದು ಅಪರೂಪ ಎಂಬಂತಿದ್ದ ಪರಿಸ್ಥಿತಿ ಬದಲಾಗಿದ್ದು, ಇದೇ ಮೊದಲ ಸಲ ಎಂಬಂತೆ ಈ ಸ್ಟಾರ್ ​ನಟರಿಬ್ಬರ ಅಭಿಮಾನಿಗಳು ಒಗ್ಗೂಡಿದ್ದಾರೆ. ಇಂಥದ್ದೊಂದು ಒಂದುಗೂಡುವಿಕೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಕಾರಣ ಹಾಗೂ ಪ್ರೇರಣೆಯೂ ಆಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ನಗರದಲ್ಲಿರುವ ಎಲ್ಲ ಪ್ರತಿಮೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿರುವುದು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ನಮಗೂ ನ್ಯಾಯಾಲಯದ ಆದೇಶದ ಮೇಲೆ ಗೌರವಿದೆ. ಆದರೆ ಪ್ರತಿಮೆ ಅಭಿಮಾನಿಗಳ ಹಕ್ಕು ಎಂಬುದನ್ನು ಸಾಬೀತುಪಡಿಸಲು ಕಾಲಕೂಡಿ ಬಂದಿದೆ. ಅದಕ್ಕಾಗಿ ಡಾ.ರಾಜ್​ ಹಾಗೂ ಡಾ.ವಿಷ್ಣು ಅಭಿಮಾನಿಗಳು ಎಲ್ಲ ಸಂಘರ್ಷ ಮರೆತು ಒಂದಾಗಿ ಬಿಬಿಎಂಪಿ ನಡೆ ವಿರುದ್ಧ ಸಮರ ಸಾರಲಿದ್ದೇವೆ. ಅದಕ್ಕಾಗಿ ಅಭಿಮಾನಿಗಳ ಸಮಾಗಮ ಹಮ್ಮಿಕೊಳ್ಳಲಾಗಿದೆ ಎಂದಿರುವ ಅಭಿಮಾನಿಗಳು ನಾಳೆ ಸುದ್ದಿಗೋಷ್ಠಿಯನ್ನೂ ಹಮ್ಮಿಕೊಂಡಿದ್ದಾರೆ.

ನಾಳೆ (ಸೆ. 5) ಬೆಳಗ್ಗೆ ರಾಜಾಜಿನಗರ 5ನೇ ಹಂತದಲ್ಲಿರುವ ಡಾ.ರಾಜಕುಮಾರ್​ ಸಮುದಾಯ ಭವನದಲ್ಲಿ ಸಮಾವೇಶಗೊಳ್ಳಲಿರುವ ಡಾ.ರಾಜ್​-ಡಾ.ವಿಷ್ಣು ಅಭಿಮಾನಿಗಳು, ತಮ್ಮ ಮುಂದಿನ ನಡೆ ಕುರಿತು 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ತಿಳಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.